ನವದೆಹಲಿ, ಏ 23 (DaijiworldNews/DB): ಉನ್ನತ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ತೆರಳುವಂತಿಲ್ಲ ಎಂದು ಯುಜಿಸಿ ಅಧಿಸೂಚನೆ ಹೊರಡಿಸಿದೆ. ಪಾಕ್ನಲ್ಲಿ ಕಲಿತರೆ ಮುಂದೆ ಭಾರತದಲ್ಲಿ ಕಲಿಕೆಗಾಗಲೀ, ಉದ್ಯೋಗಕ್ಕಾಗಲಿ ಅರ್ಹತೆ ಇರುವುದಿಲ್ಲ ಎಂದು ತಿಳಿಸಿದೆ.
ಶೈಕ್ಷಣಿಕ ಜೀವನ ರೂಪಿಸಿಕೊಳ್ಳಲು ವಿದೇಶಕ್ಕೆ ತೆರಳುವುದು ಸಾಮಾನ್ಯ. ಕೆಲವರು ಅತಿ ಕಡಿಮೆ ವೆಚ್ಚದಲ್ಲಿ ಸಿಗುವ ಶಿಕ್ಷಣ ಸಲುವಾಗಿಯೂ ವಿದೇಶಗಳಿಗೆ ತೆರಳುತ್ತಾರೆ. ಹೀಗೆ ಹೋಗುವುದಕ್ಕಿಂತ ಮುಂಚೆ ನೀವು ಪಾಕಿಸ್ತಾನವನ್ನು ಆಯ್ಕೆ ಮಾಡಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ಈ ಶೈಕ್ಷಣಿಕ ವರ್ಷದಿಂದಲೇ ಪಾಕಿಸ್ತಾನದಲ್ಲಿ ಉನ್ನತ ಶಿಕ್ಷಣಕ್ಕೆ ತೆರಳುವವರಿಗೆ ಮುಂದೆ ಭಾರತದಲ್ಲಿ ಯಾವುದೇ ಕೋರ್ಸ್ ಕಲಿಕೆಗೆ, ಉದ್ಯೋಗ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೊರಡಿಸಿರುವ ಜಂಟಿ ಅಧಿಸೂಚನೆಯಲ್ಲಿ ಪಾಕಿಸ್ತಾನಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗದಿರುವಂತೆ ಸೂಚಿಸಿದೆ.
ಪಾಕ್ನ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲುದ್ದೇಶಿಸಿರುವ ಭಾರತೀಯ ಪ್ರಜೆ, ಭಾರತದ ಸಾಗರೋತ್ತರ ಪ್ರಜೆಯು ಯಾವುದೇ ವಿಷಯದಲ್ಲಿ ಪಾಕ್ನಲ್ಲಿ ಪಡೆದ ಶೈಕ್ಷಣಿಕ ಅರ್ಹತೆಗಳನ್ನು ಭಾರತದಲ್ಲಿ ಪರಿಗಣಿಸಲಾಗುವುದಿಲ್ಲ. ಭಾರತದಲ್ಲಿ ಉನ್ನತ ವ್ಯಾಸಂಗಕ್ಕೆ, ಉದ್ಯೋಗ ಪಡೆಯಲು ಪಾಕ್ ಶೈಕ್ಷಣಿಕ ಅರ್ಹತೆಗಳು ನೆರವಿಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಈ ಸುತ್ತೋಲೆಯು ಭಾರತೀಯ ಪೌರತ್ವವನ್ನು ಪಡೆದ ಪಾಕಿಸ್ತಾನಿ ವಲಸಿಗರಿಗೆ ವಿನಾಯಿತಿ ನೀಡುತ್ತದೆ.