ಬೆಂಗಳೂರು, ಏ 23 (DaijiworldNews/DB): ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲಿ ಬುಲ್ಡೋಜರ್ ಪ್ರಯೋಗದ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ದಾಂಧಲೆ ಎಬ್ಬಿಸುವವರಿಗೆ ಮನೆಯೂ ಸಿಗಬಾರದು, ಅಂತಹ ವ್ಯವಸ್ಥೆ ಜಾರಿಗೆ ತರಬೇಕು. ಹೀಗಾಗಿ ಉತ್ತರ ಪ್ರದೇಶದಲ್ಲಿ ಮಾಡಿದಂತೆ ರಾಜ್ಯದಲ್ಲಿಯೂ ಬುಲ್ಡೋಜರ್ ಪ್ರಯೋಗ ಅಗತ್ಯವಾಗಿದೆ ಎಂದರು.
ಎಲ್ಲಾ ಗಲಭೆಗಳ ಹಿಂದಿನ ಸೃಷ್ಟಿಕರ್ತರು ಕಾಂಗ್ರೆಸ್ಸಿಗರು. ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆ, ಇದೀಗ ಹುಬ್ಬಳ್ಳಿ ಘಟನೆಯಲ್ಲೂ ಅವರದೇ ಕೈವಾಡವಿದೆ. ಹೊಡೆದವರು, ಏಟು ತಿಂದವರು ಎರಡೂ ಅವರೇ. ಅಮಾಯಕರ ಬಂಧನದ ಬಗ್ಗೆ ಮಾತನಾಡಿದ್ದರು. ಇದೀಗ ಪಿಎಸ್ಐ ನೇಮಕಾತಿ ವಿಚಾರದಲ್ಲಿಯೂ ಅಕ್ರಮ ಎಸಗಿದ ಆರೋಪದ ಮೇಲೆ ಕಾಂಗ್ರೆಸ್ಸಿಗರ ಬಂಧನವಾಗುತ್ತಿದೆ ಎಂದು ಅವರು ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಗಲಭೆ ಸೃಷ್ಟಿಸಿದವರಿಗೆ ವಿದೇಶಿಗರ ನಂಟಿರುವ ಸಾಧ್ಯತೆಗಳಿವೆ. ಹಿಜಾಬ್ ವಿಚಾರವೂ ಮೊದಲು ವಿದೇಶೀ ಚಾನೆಲ್ಗಳಲ್ಲೇ ಪ್ರಸಾರವಾಗಿದೆ. ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಇರುವವರೂ ಇದ್ದಾರೆ, ಒಳ್ಳೆಯ ಮನುಷ್ಯರಾಗಿ ಬದುಕುತ್ತಿರುವವರೂ ಇದ್ದಾರೆ ಎಂದು ಇದೇ ವೇಳೆ ಅಶೋಕ್ ತಿಳಿಸಿದರು.