ಬೀದರ್, ಏ 23 (DaijiworldNews/DB): ಹಾಲು ಒಕ್ಕೂಟದ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕಲಬುರ್ಗಿಯಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ. ಇದರ ಬೆನ್ನಲ್ಲೇ ಎಚ್.ಡಿ. ಕುಮಾರಸ್ವಾಮಿಯವರು ಮಾತನಾಡಿ, ಹಾಲು ಒಕ್ಕೂಟ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ ಎಂದಿರುವುದು ಬಹಳಷ್ಟು ಮಹತ್ವ ಪಡೆದಿದೆ.
ಸುದ್ದಿಗಾರರೊಂದಿಗೆ ಇಲ್ಲಿನ ಕಾಶೆಂ ಪುರದಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಒಂದು ಸೀಟು ಪಡೆದುಕೊಳ್ಳಬೇಕಾದರೆ 25 ಲಕ್ಷ ರೂಪಾಯಿ ನೀಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ. ಕೆಪಿಎಸ್ಇ ನೇಮಕಾತಿಗೆ ಒಂದು ಸೀಟಿಗೆ 1 ಕೋಟಿ ರೂಪಾಯಿ ನೀಡಬೇಕಾಗಿದೆ. ಭ್ರಷ್ಟಾಚಾರ ನಿರಂತರವಾಗಿ ಇಲ್ಲಿಯೂ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಶ್ರೀಲಂಕಾದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ನಮ್ಮಲ್ಲೂ ತಲೆದೋರುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದರು.