ಬೆಂಗಳೂರು, ಏ 23 (DaijiworldNews/DB): ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿ ಅಧಿಕಾರ ಪಡೆಯುವುದು ಕಾಂಗ್ರೆಸ್ನ ಉದ್ದೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಗಲಭೆ, ಶಿವಮೊಗ್ಗದಲ್ಲಿ ಗಲಭೆ ಯತ್ನದಲ್ಲಿ ಅವರ ಕೈವಾಡ ಇತ್ತು. ಹಿಜಾಬ್ ವಿಚಾರದಲ್ಲಿಯೂ ಅವರ ಕೈವಾಡ ಎದ್ದು ಕಾಣುತ್ತಿತ್ತು. ಇದೀಗ ಹುಬ್ಬಳ್ಳಿ ಘಟನೆಯಲ್ಲೂ ಅದನ್ನೇ ಮುಂದುವರಿಸಿದ್ದಾರೆ. ಸಮಾಜಘಾತುಕ ಶಕ್ತಿಗಳೊಂದಿಗೆ ಕೈ ಜೋಡಿಸುವುದು ಅವರ ಅಭ್ಯಾಸ ಆಗಿ ಹೋಗಿದೆ. ಸದ್ಯ ಅಧಿಕಾರ ಪಡೆಯಲು ಇಂತಹ ಅರಾಜಕತೆಯನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಬಿಂದ್ರನ್ ವಾಲೆಯನ್ನು ಸೃಷ್ಟಿಸಿರುವುದೇ ಕಾಂಗ್ರೆಸ್. ದಾವೂದ್ ಇಬ್ರಾಹಿಂ ಸಹಿತ ಭಯೋತ್ಪಾದಕರಿಗೆ ಬೆಂಬಲ ನೀಡಿದ ಇತಿಹಾಸವೂ ಆ ಪಕ್ಷಕ್ಕಿದೆ. ಮನಸ್ಥಿತಿ ಯಥಾಪ್ರಕಾರ ಮುಂದುವರಿದಿದೆಯೇ ಹೊರತು ಬದಲಾಗಿಲ್ಲ ಎಂದು ಅವರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಗಲಭೆ ಎಬ್ಬಿಸುವವರ ಆಸ್ತಿ ಮುಟ್ಟುಗೋಲು ಹಾಕುವ ನಿಟ್ಟಿನಲ್ಲಿ ಸರ್ಕಾರ ಕಾನೂನು ರೂಪಿಸಬೇಕು ಎಂದವರು ಇದೇ ವೇಳೆ ಆಗ್ರಹಿಸಿದರು.
ನೆಹರೂ ಅವರಿಂದ ಮನಮೋಹನ್ ಸಿಂಗ್ವರೆಗೂ ಅಧಿಕಾರದ ವೇಳೆ ಕಾಂಗ್ರೆಸ್ನಲ್ಲಿ ಭ್ರಷ್ಟಾಚಾರ ನಡೆದಿದೆ. ವಲ್ಲಭಬಾಯಿ ಪಟೇಲ್ ಅವರದ್ದು ಮಾತ್ರ ನಿಷ್ಕಳಂಕ ವ್ಯಕ್ತಿತ್ವವಾಗಿತ್ತು. ಭ್ರಷ್ಟಾಚಾರವನ್ನೇ ಮಾಡಿಕೊಂಡ ಬಂದ ಕಾಂಗ್ರೆಸ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದವರು ಇದೇ ವೇಳೆ ಟೀಕಿಸಿದರು.