ಬೆಂಗಳೂರು, ಏ 23 (DaijiworldNews/DB): ಪಿಎಸ್ಐ ಹುದ್ದೆಗೆ ಅಕ್ರಮ ನೇಮಕಾತಿ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಅವರಿಗೆ ಒಂದು ತಿಂಗಳ ಹಿಂದೆಯೇ ಆಡಿಯೋ ದಾಖಲೆ ಲಭಿಸಿದರೂ ಇಲ್ಲಿವರೆಗೆ ಅದನ್ನು ಬಹಿರಂಗಗೊಳಿಸದಿರಲು ಕಾರಣವೇನು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ನಗರದಲ್ಲಿ ಈ ಕುರಿತು ಶನಿವಾರ ಮಾತನಾಡಿದ ಅವರು, ಸಾಕ್ಷ್ಯವಿದ್ದರೂ ಬಿಡುಗಡೆ ಮಾಡದಿರುವ ಕುರಿತು ಅವರು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಸಿಐಡಿ ಅಧಿಕಾರಿಗಳು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಪ್ತರೆನ್ನಲಾದ ಅವರ ಪಕ್ಷದ ನಾಯಕರನ್ನು ಬಂಧಿಸಿದ್ದಾರೆ. ಬಹುಶಃ ಆಪ್ತರು ಸಿಕ್ಕಿ ಬೀಳುವುದಿಲ್ಲ ಎಂಬ ಹುಸಿ ನಂಬಿಕೆಯಿಂದ ಅವರು ಸಾಕ್ಷ್ಯ ಬಿಡುಗಡೆ ಮಾಡದೇ ಇದ್ದಿರಬಹುದು ಎಂದು ಇದೇ ವೇಳೆ ವ್ಯಂಗ್ಯವಾಡಿದರು.
ಅಕ್ರಮದಿಂದಾಗಿ ಪ್ರಾಮಾಣಿಕರಿಗೆ ಅನ್ಯಾಯವಾಗಿದೆ. ಹೀಗಾಗಿ ನಾನೇ ಮುತುವರ್ಜಿ ವಹಿಸಿ ತನಿಖೆಗೆ ಆದೇಶಿಸಿದ್ದೆ. ಆನಂತರ ಪ್ರಿಯಾಂಕ್ ಖರ್ಗೆ ಅವರು ಸುದ್ದಿಗೋಷ್ಠಿಯನ್ನೂ ನಡೆಸಿದ್ದಾರೆ. ಆಗಲೂ ಆಡಿಯೋ ದಾಖಲೆ ಬಗ್ಗೆ ಮಾಹಿತಿ ಹೊರ ಹಾಕಿರಲಿಲ್ಲ. ಈಗ ಅವರ ಆಪ್ತರ ಬಂಧನವಾದ ಬಳಿಕ ಸಾಕ್ಷ್ಯ ಬಹಿರಂಗಪಡಿಸಿರುವುದರ ಹಿಂದಿನ ಉದ್ದೇಶವೇನು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ನಿಷ್ಪಕ್ಷವಾಗಿ ತನಿಖೆ ನಡೆಯುತ್ತಿದ್ದು, ಕಾಂಗ್ರೆಸ್ಸಿಗರು ಸಹಕರಿಸಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದೆ ಅಕ್ರಮ ಎಸಗಿದವರಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ಯೋಚಿಸಬೇಕು ಎಂದವರು ಇದೇ ವೇಳೆ ಮನವಿ ಮಾಡಿದರು.