ಮುಂಬೈ, ಏ 23 (DaijiworldNews/DB): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ನಿವಾಸ ’ಮಾತೋಶ್ರೀ’ಯ ಮುಂಭಾಗದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾ ಹೇಳಿಕೆ ನೀಡಿದ ಬೆನ್ನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಕಾರ್ಯಕರ್ತರು ಸಂಸದೆಯ ವಸತಿ ಸಮುಚ್ಚಯದ ಮುಂಭಾಗ ಸೇರಿ ಘೋಷಣೆಗಳನ್ನು ಕೂಗಿದರು.
ಅಪಾರ್ಟ್ಮೆಂಟ್ ಮುಂಭಾಗದ ಬ್ಯಾರಿಕೇಡ್ಗಳನ್ನು ಮುರಿದು ಸಂಸದೆ ಮತ್ತು ಶಾಸಕ ದಂಪತಿಯ ಮನೆ ಆವರಣ ಪ್ರವೇಶಿಸಲು ಶಿವಸೇನಾ ಕಾರ್ಯಕರ್ತರು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ತತ್ಕ್ಷಣ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಡಿಸಿಪಿ ಮಂಜುನಾಥ್ ಸಿಂಗೆ ಅವರ ತಂಡ ರಾಣೆ ದಂಪತಿಯ ಮನೆಗೆ ಭೇಟಿ ನೀಡಿ ಶುಕ್ರವಾರ ನೊಟೀಸ್ ನೀಡಿ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು.
ಮಾತೋಶ್ರೀ ಮುಂಭಾಗದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದು, ಜನ ಸೇರುವುದನ್ನು ನಿಯಂತ್ರಿಸುವ ಸಲುವಾಗಿ ಸಿಎಂ ಠಾಕ್ರೆ ನಿವಾಸಕ್ಕೆ ತೆರಳುವ ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ. ಸಂಸದೆ ರಾಣಾ ದಂಪತಿಯ ಮನೆ ಮುಂದೆಯೂ ಪೊಲೀಸರನ್ನು ನಿಯೋಜಿಸಲಾಗಿದೆ. ಈ ವೇಳೆ ಮಾತನಾಡಿರುವ ನವನೀತ್ ರಾಣಾ, ನಾವು ಹನುಮಾನ್ ಚಾಲೀಸ ಪಠಿಸುವುದಾಗಿ ಹೇಳಿದ್ದಕ್ಕೆ ಮುಖ್ಯಮಂತ್ರಿಯವರು ಶಿವಸೇನೆ ಕಾರ್ಯಕರ್ತರನ್ನು ಕಳುಹಿಸಿ ನಮ್ಮನ್ನು ತಡೆಯುವುದಕ್ಕೆ ಯತ್ನಿಸಿದ್ದಾರೆ ಎಂದು ಆಪಾದಿಸಿದ್ದಾರೆ.
ದಂಪತಿಯ ಹೇಳಿಕೆಯನ್ನು ಬಲವಾಗಿ ಖಂಡಿಸಿರುವ ಶಿವಸೇನಾ ಕಾರ್ಯಕರ್ತರು ಮಾತೋಶ್ರೀ ಮುಂದೆ ಗುರುವಾರದಿಂದಲೇ ಜಮಾಯಿಸಿದ್ದರು. ಶಿವಸೇನಾ ಮುಖಂಡರಾದ ಕಿಶೋರಿ ಪೆಡ್ನೇಕರ್ ಮಾತನಾಡಿ, ರಾಣಾ ದಂಪತಿಯ ಸವಾಲನ್ನು ನಾವು ಸ್ವೀಕರಿಸಿದ್ದೇವೆ. ಅವರು ಬಂದು ಇಲ್ಲಿ ಅವರ ಸವಾಲು ಪೂರ್ಣಗೊಳಿಸಿದರೆ ನಾವು ಖಂಡಿತಾ ಅವರನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.