ಗುಂಡ್ಲುಪೇಟೆ, ಏ 23 (DaijiworldNews/MS)" ಪ್ರೇಮಿಗಳಿಬ್ಬರು ಹಾಡಹಗಲೇ ರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ಮುತ್ತಿನ ಮತ್ತಿನಾಟ ಪ್ರದರ್ಶಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬೈಕ್ ಚಲಾಯಿಸಿದ ಸವಾರನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸವಾರರೊಬ್ಬ ಬೈಕ್ ಟ್ಯಾಂಕ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಬೈಕ್ ಚಲಾಯಿಸಿದ್ದ. ಹುಡುಗಿಯೂ ಆತನನನ್ನು ಬಿಗಿಯಾಗಿ ತಬ್ಬಿಕೊಂಡು, ಪರಸ್ಪರ ಚುಂಬಿಸುತ್ತಿದ್ದರು. ಇದನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಸಾರ್ವಜನಿಕರಿಂದ ಈ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ನಗರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಶುಕ್ರವಾರ ಬೈಕ್ ನೋಂದಣಿ ಸಂಖ್ಯೆ ಆಧರಿಸಿ, ಅದರ ಮಾಲೀಕನನ್ನು ಪತ್ತೆ ಹಚ್ಚಿ, ಸಾರ್ವಜನಿಕ ಸ್ಥಳದಲ್ಲಿ ಯುವತಿಯನ್ನು ಕುಳ್ಳಿರಿಸಿ "ಮೈ'' ಮರೆತು ವರ್ತಿಸಿದ್ದ ಆರೋಪಿ ಸ್ವಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.