ಕಲಬುರಗಿ, ಏ 22 (DaijiworldNews/DB): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿಯ ಜೆಎಂಎಫ್ಸಿ ನ್ಯಾಯಾಲಯ ವಜಾಗೊಳಿಸಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಕೆಲವು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿಯ ಪತಿ ರಾಜೇಶ್ ಹಾಗರಗಿ, ವೀರೇಶ್, ಅರುಣ್, ಪ್ರವೀಣ್, ಚೇತನ್, ಸಾವಿತ್ರಿ, ಸುಮಾ, ಸಿದ್ದಮ್ಮಾ ಎಂಬವರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಪರಿಶೀಲಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಆರೋಪಿಗಳಿಗೆ ಸದ್ಯಕ್ಕೆ ಮುಕ್ತ ಇಲ್ಲದಂತಾಗಿದೆ.
ಈ ನಡುವೆ ಇತರ ಆರೋಪಿಗಳಾದ ಹಯ್ಯಾಳಿ ದೇಸಾಯಿ, ರುದ್ರಗೌಡ, ವಿಶಾಲ್, ಶರಣಬಸಪ್ಪ ಮುಂತಾದವರನ್ನು ಏ. 29ರವರೆಗೆ ಎಂಟು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಇನ್ನೂ ತಲೆ ಮರೆಸಿಕೊಂಡಿದ್ದು, ಆಕೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.