ರಾಯಚೂರು, ಏ 22 (DaijiworldNews/DB): ಸಿದ್ದರಾಮಯ್ಯ ಅವರು ಅವರ ಘನತೆಗೆ ತಕ್ಕಂತೆ ಮಾತನಾಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಸರ್ಕಾರಕ್ಕೆ ದಮ್ ಇದ್ದರೆ ಸಂಘಟನೆಗಳನ್ನು ನಿಷೇಧಿಸಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆರ್ಎಸ್ಎಸ್ನ್ನು ಎಸ್ಡಿಪಿಐಯನ್ನು ಹೋಲಿಕೆ ಮಾಡುವುದು ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ನೆಹರು ಕಾಲದಲ್ಲೇ ಗಣರಾಜ್ಯೋತ್ಸವದ ಪಥ ಸಂಚನದಲ್ಲಿ ಆರ್ಎಸ್ಎಸ್ಗೆ ಮನ್ನಣೆ ಸಿಕ್ಕಿತ್ತು. ಹಾಗಂದ ಮೇಲೆ ಆ ಸಂಘಟನೆಯ ಉತ್ಕೃಷ್ಟತೆಯನ್ನು ಅವರು ಅರಿತುಕೊಳ್ಳಬೇಕು ಎಂದರು.
ಸಿದ್ದರಾಮಯ್ಯರಂತೆ ನಮಗೂ ಮಾತನಾಡಲು ಬರುತ್ತದೆ. ಆದರೆ ಅದು ಅಗೌರವವಾಗುತ್ತದೆ ಎಂಬ ಕಾರಣಕ್ಕೆ ವಿನಾಕಾರಣ ಹೇಳಿಕೆ ನೀಡುವುದಿಲ್ಲ. ಎಳೆಯ ಹುಡುಗರಂತೆ ದಮ್ ಮುಂತಾದ ಶಬ್ದಗಳನ್ನು ಪ್ರಯೋಗಿಸುವ ಮೊದಲು ಅವರು ತಮ್ಮ ಘನತೆಯನ್ನು ಅರ್ಥ ಮಾಡಿಕೊಳ್ಳಲಿ. ಘನತೆ ಕುಂದಿಸುವ ಹೇಳಿಕೆಗಳನ್ನು ನೀಡದಿರಲಿ ಎಂದು ಜೋಶಿ ತಿಳಿಸಿದರು.