ಹಾಸನ, ಏ 22 (DaijiworldNews/DB): ನನಗೆ ಅಧಿಕಾರ ಪಡೆಯಬೇಕೆಂಬ ಆಸೆ ಇಲ್ಲ. ಆದರೆ ರಾಜ್ಯವನ್ನು ಹೇಗೆ ಉಳಿಸುವುದು ಎಂಬುದೇ ಚಿಂತೆಯಾಗಿದೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದ್ದಾರೆ.
ಜನತಾ ಜಲಧಾರೆ ಸಮಾವೇಶ ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ನಮ್ಮಲ್ಲಿ ನೀರಾವರಿ ವಿಚಾರದಲ್ಲಿ ಒಗ್ಗಟ್ಟಿಲ್ಲದ ಕಾರಣ ನಮ್ಮ ಬೇಡಿಕೆಗಳಿಗೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ರಾಜ್ಯಕ್ಕೆ ಒಳಿತಾಗಬೇಕಾದರೆ ಎಲ್ಲರೂ ಒಂದಾಗಿ ಹೋರಾಡಬೇಕು. ಚುನಾವಣೆ ಮತ್ತು ಹೋರಾಟ ಬೇರೆ ಬೇರೆ. ನೀರಾವರಿಗಾಗಿ ಒಟ್ಟಾಗದಿದ್ದರೆ ತಮಿಳರ ಹೊಡೆತದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಎಲ್ಲಾ ಪಕ್ಷಗಳ ಮುಖಂಡರಿಗೆ ಅವರು ಸಲಹೆ ನೀಡಿದರು.
ಸುಪ್ರೀಂಕೋರ್ಟ್, ನ್ಯಾಯಾಧೀಕರಣದ ತೀರ್ಮಾನಕ್ಕೆ ವಿರುದ್ಧವಾಗಿ ತಮಿಳುನಾಡಿನಲ್ಲಿ ಅನೇಕ ನೀರಾವರಿ ಯೋಜನೆಗಳು ಕುಡಿಯುವ ನೀರಿನ ನೆಪದಲ್ಲಿ ನಡೆಯುತ್ತಿವೆ. ಆದರೆ ನಮ್ಮಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವಂತದ್ದೇ ಎಂದವರು ವಿಷಾದಿಸಿದರು.
1962ರಿಂದಲೇ ನಾನು ರಾಜ್ಯದ ಒಳಿತಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಆದರೆ ಮತ್ತೆ ಹೋರಾಟ ಮಾಡುವ ಶಕ್ತಿ ನನ್ನಲ್ಲಿಲ್ಲ. ನೀರಾವರಿಗಾಗಿ ಎಲ್ಲರೂ ಒಗ್ಗಟ್ಟಾದರೆ ಅದೇ ಸಂತೋಷ. ಮಗ, ಮೊಮ್ಮಗನನ್ನು ಸಿಎಂ ಮಾಡಲು ಜಲಧಾರೆ ಕಾರ್ಯಕ್ರಮ ಮಾಡುತ್ತಿಲ್ಲ. ಸಿಎಂ ಮಾಡುವುದು ಜನರಿಗೆ ಬಿಟ್ಟ ವಿಚಾರ. ಈ ಕಾರ್ಯಕ್ರಮ ಕುಮಾರಸ್ವಾಮಿಯವರ ಕನಸಿನ ಕೂಸು. ಆದರೆ ಲಘುವಾಗಿ ಮಾತನಾಡುವ ಕೆಲವು ರಾಜಕಾರಣಿಗಳಿದ್ದಾರೆ. ನಾವು ಸರಿಯಾಗಿದ್ದರೆ ಜನ ಸಹಕರಿಸುತ್ತಾರೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಇದೇ ವೇಳೆ ಅವರು ತಿರುಗೇಟು ನೀಡಿದರು.
ಯುಪಿಎ ಸರ್ಕಾರವಿದ್ದ ಸಂದರ್ಭದಲ್ಲಿ ರಾಜ್ಯದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಾನು ವಿಸ್ತೃತವಾಗಿ ತಿಳಿಸಿದ್ದೆ. ಆದರೆ, ಯಾರೂ ಬೆಂಬಲಿಸಿಲ್ಲ. ಇನ್ನು ಮುಂದೆಯಾದರೂ ರಾಷ್ಟ್ರೀಯ ಪಕ್ಷಗಳ ನಾಯಕರು ಈ ಸಮಸ್ಯೆ ಬಗ್ಗೆ ಅರ್ಥ ಮಾಡಿಕೊಂಡು ನೀರಿಗಾಗಿ ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದು ಎಚ್ಡಿಡಿ ಸಲಹೆ ನೀಡಿದರು.