ಬೆಂಗಳೂರು, ಏ 22 (DaijiworldNews/DB): ಕಾಂಗ್ರೆಸ್ನಲ್ಲಿ ಇನ್ನೂ ನಾಯಕರು ಯಾರು ಎಂಬ ಗೊಂದಲ ಬಗೆ ಹರಿದಿಲ್ಲ. ಆ ಪಕ್ಷದಲ್ಲಿ ಅಪ್ಪು, ಪಪ್ಪು ಮಾತ್ರ ಇರುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ನಾಯಕತ್ವಕ್ಕೆ ಕಿತ್ತಾಡುತ್ತಿದ್ದಾರೆ. ಆದರೆ ಇವರಲ್ಲಿ ನಿಜವಾದ ನಾಯಕ ಯಾರು ಎಂಬ ಗೊಂದಲ ಇನ್ನೂ ಬಗೆ ಹರಿದಿಲ್ಲ ಎಂದು ವ್ಯಂಗ್ಯವಾಡಿದರು.
ಮೊದಲೆಲ್ಲ ಚುನಾವಣೆಗೆ ಮೂರ್ನಾಲ್ಕು ತಿಂಗಳಿರುವಾಗ ಆ ಪಕ್ಷದಲ್ಲಿ ಪ್ರಚಾರ ಕಾರ್ಯ ಶುರುವಾಗುತ್ತಿತ್ತು. ಆದರೆ ರಾಜ್ಯಕ್ಕೆ ಮೋದಿ, ಅಮಿತ್, ನಡ್ಡಾ ಬಂದ ಮೇಲೆ ಅವರಿಗೆ ಚಳಿ ಶುರುವಾಗಿದೆ. ಅದಕ್ಕಾಗಿ ಚುನಾವಣೆಗೆ ಒಂದು ವರ್ಷ ಇರುವಾಗಲೇ ಪ್ರಚಾರ ಆರಂಭಿಸುತ್ತಿದ್ದಾರೆ. ಆದರೆ ಹಿಜಾಬ್, ಹುಬ್ಬಳ್ಳಿ ಗಲಭೆ ವಿಚಾರ ಬಿಟ್ಟರೆ ಅವರಿಗೆ ಬೇರೇನೂ ಕಾಣುತ್ತಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಆ ಪಕ್ಷದಲ್ಲಿ ಯಾರೂ ಇರುವುದಿಲ್ಲ ಎಂದು ಟೀಕಿಸಿದರು.
ಜೆಡಿಎಸ್ ಆರು ಸೀಟು ಗೆಲ್ಲುವುದೇ ಹೆಚ್ಚು. ಈಗಾಗಲೇ ಅಲ್ಲಿಂದ ಗಂಟು ಮೂಟೆ ಕಟ್ಟಲು ತುದಿಗಾಲಿನಲ್ಲಿ ಹಲವರು ನಿಂತಿದ್ದಾರೆ. ಕಾಂಗ್ರೆಸ್, ಜೆಡಿಎಸ್ನಿಂದ ಬಿಜೆಪಿಗೆ ಬರಲು ಹಲವರು ತಯಾರಾಗಿದ್ದಾರೆ. ಆದರೆ ಹೈಕಮಾಂಡ್ ಅನುಮತಿ ನೀಡಿದಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಇದೇ ವೇಳೆ ಆರ್. ಅಶೋಕ್ ತಿಳಿಸಿದರು.
ಅಮೆರಿಕಾಕ್ಕೆ ಪ್ರಧಾನಿ ಮೋದಿ ತೆರಳಿದರೆ ಅವರ ಅಧ್ಯಕ್ಷರ ಸಭೆಗಿಂತ ಹೆಚ್ಚು ಜನ ಸೇರುತ್ತಾರೆ. ಉಕ್ರೇನ್-ರಷ್ಯಾ ಸಮರದಲ್ಲಿ ಉಭಯ ದೇಶಗಳ ನಾಯಕರೂ ಮೋದಿ ದೂರವಾಣಿ ಕರೆಗಳನ್ನು ಮಾತ್ರ ಸ್ವೀಕರಿಸುತ್ತಾರೆ. ಭಾರತದ ಶಕ್ತಿ ಏನು ಎಂಬುದು ಇದರಿಂದ ಗೊತ್ತಾಗುತ್ತದೆ. ಇಂತಹ ನಾಯಕತ್ವವನ್ನೇ ದೇಶದ ಜನರು ಬಯಸುವುದು ಎಂದರು.