ಹುಬ್ಬಳ್ಳಿ, ಏ 22 (DaijiworldNews/DB): ಸರ್ಕಾರಕ್ಕೆ ದಮ್ ಇದ್ದರೆ ಶಾಂತಿ ಕದಡುವ ಸಂಘಟನೆಗಳ ಮೇಲೆ ನಿಷೇಧ ಹೇರಲಿ. ಆದರೆ ಆ ಧೈರ್ಯ ಸರ್ಕಾರಕ್ಕಿದೆಯೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಾದಾಮಿಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ಸಂಘಟನೆಗಳ ಕೈವಾಡ ಗಲಭೆ ಹಿಂದೆ ಇದೆ ಎನ್ನುತ್ತಾ ಕಾಲಹರಣ ಮಾಡುವ ಬದಲು ಅಂತಹ ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಲಿ. ಯಾರೂ ಕೂಡಾ ಬೇಡ ಎನ್ನುವುದಿಲ್ಲ. ಎಸ್ಡಿಪಿಐ, ಆರ್ಎಸ್ಎಸ್, ಬಜರಂಗಳ, ಎಐಎಂಐಎಂಗಳಂತಹ ಸಂಘಟನೆಗಳನ್ನು ನಿಷೇಧ ಮಾಡುವ ಧೈರ್ಯ ಸರ್ಕಾರಕ್ಕೆ ಇದೆಯಾ ಎಂದು ಪ್ರಶ್ನಿಸಿದರು.
ಗೃಹ ಸಚಿವ ಸ್ಥಾನ ಜವಾಬ್ದಾರಿಯುತವಾದುದು. ಆದರೆ ಆ ಸ್ಥಾನದಲ್ಲಿರುವ ಆರಗ ಜ್ಞಾನೇಂದ್ರ ಪದೇಪದೇ ಬೇಜವಾಬ್ದಾರಿತನದಿಂದ ಮಾತನಾಡುತ್ತಿದ್ದಾರೆ. ಶಾಂತಿ, ಸೌಹಾರ್ದ ಕಾಪಾಡಬೇಕಾದ ಇಲಾಖೆಯ ಸಚಿವರೇ ಅದನ್ನು ಕೆಡಿಸುವ ಮಾತನಾಡುತ್ತಿದ್ದಾರೆ. ಅವರಿಗೆ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ಅಸಾಧ್ಯವಾದರೆ ರಾಜೀನಾಮೆ ನೀಡಿ ಮನೆಗೆ ತೆರಳಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಕರ್ನಾಟಕದಲ್ಲಿ ಸರ್ಕಾರ ರಚಿಸುವುದಾಗಿ ಅರವಿಂದ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಯಾರಿಗೆ ಅಧಿಕಾರ ಕೊಡಬೇಕೆನ್ನುವುದನ್ನು ರಾಜ್ಯದ ಜನ ತೀರ್ಮಾನಿಸುತ್ತಾರೆ ಎಂದರು. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ವಿಚಾರ ನನಗೆ ತಿಳಿದಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಪಿಎಸ್ಐ ನೇಮಕಾತಿ ಅಕ್ರಮದಿಂದಾಗಿ ಅರ್ಹರಿಗೆ ಅನ್ಯಾಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ದಿವ್ಯಾ ಹಾಗರಗಿಯನ್ನು ಕೂಡಲೇ ಬಂಧಿಸಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದರು.