ನವದೆಹಲಿ, ಏ 22 (DaijiworldNews/MS): ಕಳೆದ ಕೆಲವು ವಾರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ , ದೋಷಪೂರಿತ ವಾಹನಗಳನ್ನು ಹಿಂಪಡೆಯುವಂತೆ ಹಾಗೂ ನಿರ್ಲಕ್ಷ್ಯ ತೋರಿದ ಕಂಪನಿಗೆ ಭಾರೀ ದಂಡವನ್ನು ವಿಧಿಸುವ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಈ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, , ಕಳೆದ ಕೆಲವು ವಾರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ತೊಂದರೆಗಳು ಕಾಣಿಸಿಕೊಂಡಿದ್ದು, ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದರೆ ಎಲೆಕ್ಟ್ರಿಕ್ ವಾಹನ ತಯಾರಕರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಬದ್ಧವಾಗಿರಲಿದೆ. ದೋಷಯುಕ್ತ ವಾಹನಗಳನ್ನು ತಕ್ಷಣವೇ ಹಿಂಪಡೆಯಲು ಕಂಪನಿಗಳು ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ ಹಲವಾರು ಅವಘಡಗಳು ಬೆಳಕಿಗೆ ಬಂದಿವೆ. ಈ ಘಟನೆಗಳಲ್ಲಿ ಕೆಲವರು ಪ್ರಾಣ ಕಳೆದುಕೊಂಡಿರುವುದು ಮತ್ತು ಹಲವರು ಗಾಯಗೊಂಡಿರುವುದು ಅತ್ಯಂತ ದುರದೃಷ್ಟಕರ. ನಾವು ಈ ಘಟನೆಗಳ ಬಗ್ಗೆ ತನಿಖೆ ಮಾಡಲು ಮತ್ತು ಪರಿಹಾರ ಕ್ರಮಗಳ ಕುರಿತು ಶಿಫಾರಸುಗಳನ್ನು ಮಾಡಲು ತಜ್ಞರ ಸಮಿತಿಯನ್ನು ರಚಿಸಿದ್ದೇವೆ. ವರದಿಗಳ ಆಧಾರದ ಮೇಲೆ ನಾವು ಕರ್ತವ್ಯಲೋಪ ಎಸಗುವ ಕಂಪನಿಗಳಿಗೆ ಅಗತ್ಯ ಆದೇಶಗಳನ್ನು ನೀಡುತ್ತೇವೆ. ನಾವು ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳಿಗೆ ಗುಣಮಟ್ಟ ಕೇಂದ್ರಿತ ಮಾರ್ಗಸೂಚಿಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.