ಪಂಜಾಬ್, ಏ 22 (DaijiworldNews/MS): ಪಕ್ಷವನ್ನು ಬಲಪಡಿಸಲು ಶಿಸ್ತು ಅತ್ಯಗತ್ಯ. ಯಾವುದೇ ವ್ಯಕ್ತಿ ಅಥವಾ ಪಕ್ಷದಲ್ಲಿ ಶಿಸ್ತು ಇಲ್ಲದಿದ್ದರೆ ಅಲ್ಲಿ ಬೆಳವಣಿಗೆ ಇರಲು ಸಾಧ್ಯವಿಲ್ಲ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಪಂಜಾಬ್ ವ್ಯವಹಾರಗಳ ಎಐಸಿಸಿ ಉಸ್ತುವಾರಿ ಹರೀಶ್ ಚೌಧರಿ, ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಪರತಾಪ್ ಸಿಂಗ್ ಮುಂತಾದವರ ಸಮ್ಮುಖದಲ್ಲಿ ನವಜೋತ್ ಸಿಂಗ್ ಸಿದ್ದು ಬಳಿಕ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ 44 ವರ್ಷದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಅವರ ಜೊತೆ ಕಾರ್ಯಾಧ್ಯಕ್ಷರಾಗಿರುವ ಭರತ್ ಭೂಷಣ್ ಆಶು ಇಂದು ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿದ್ದು ಪಕ್ಷದ ಕಚೇರಿಗೆ ಬಂದಿದ್ದರೂ ಇತರ ಮುಖಂದರೊಂದಿಗೆ ವೇದಿಕೆ ಹಂಚಿಕೊಳ್ಳಲಿಲ್ಲ.
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಪಂಜಾಬ್ನಲ್ಲಿ ಸೋಲಿನ ಹೊಣೆ ಹೊತ್ತು ಪ್ರಮುಖ ಸ್ಥಾನದಲ್ಲಿ ಇರುವವರು ರಾಜೀನಾಮೆ ನೀಡಬೇಕು ಎಂದು ಹೈಕಮಾಂಡ್ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ನವಜೋತ್ ಸಿಂಗ್ ಸಿದ್ದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ವಾರಿಂಗ್, ತನ್ನನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿದ್ದಕ್ಕಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕತ್ವಕ್ಕೆ ಧನ್ಯವಾದ ಹೇಳಿದ್ದಾರೆ.