ನವದೆಹಲಿ, ಏ 22 (DaijiworldNews/DB): ವ್ಯಕ್ತಿಯೋರ್ವ ಮಹಿಳೆಯೋರ್ವಳನ್ನು ಬೆನ್ನಟ್ಟಿ ಆಕೆಯ ಮಕ್ಕಳ ಎದುರೇ ಇರಿದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನೈಋತ್ಯ ದೆಹಲಿಯಲ್ಲಿ ಗುರುವಾರ ನಡೆದಿದೆ.
ಮಹಿಳೆ ತನ್ನ ಮಕ್ಕಳೊಂದಿಗೆ ಮಧ್ಯಾಹ್ನದ ವೇಳೆಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಆಕೆಯನ್ನು ಬೆನ್ನಟ್ಟಿ ಬಂದು ಮಕ್ಕಳೆದುರೇ ಇರಿದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಸಾಗರ್ ಪುರ ಪೊಲೀಸ್ ಠಾಣೆಗೆ ಸಾರ್ವಜನಿಕರೊಬ್ಬರು ಕರೆ ಮಾಡಿ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತತ್ಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆ ವೇಳೆಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಕೃತ್ಯ ಎಸಗಿದಾತ ಆಕೆಯನ್ನು ಬೆನ್ನಟ್ಟಿ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ತನಿಖೆ ವೇಳೆ ಆತ ಮೃತ ಮಹಿಳೆ ಹಿಂದೆ ವಾಸವಾಗಿದ್ದ ಮನೆಯ ಅಕ್ಕಪಕ್ಕದ ಮನೆಯವನು ಎಂಬುದು ಗೊತ್ತಾಗಿದೆ. ಪ್ರಸ್ತುತ ಆಕೆ ಹೊಸ ನಿವಾಸಕ್ಕೆ ವಾಸ ಬದಲಾಯಿಸಿದ್ದಳು. ಆದರೆ ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಕೊಲೆ ಕೇಸು ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.