ಶ್ರೀನಗರ, ಏ 22 (DaijiworldNews/DB): ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ಸಿಐಎಸ್ಎಫ್ ಸಿಬಂದಿ ಪ್ರಯಾಣಿಸುತ್ತಿದ್ದ ಬಸ್ ಮೇಲೆ ಶುಕ್ರವಾರ ಮುಂಜಾನೆ ಭಯೋತ್ಪಾದಕರು ದಾಳಿ ನಡೆಸಿದ್ದು, ಓರ್ವ ಎಎಸ್ಐ ಹುತಾತ್ಮರಾಗಿದ್ದಾರೆ. ಇಬ್ಬರು ಸಿಬಂದಿ ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಬೆಳಗ್ಗಿನ ಪಾಳಿಯ ಕರ್ತವ್ಯಕ್ಕೆಂದು15 ಮಂದಿ ಸಿಐಎಸ್ಎಫ್ ಸಿಬಂದಿ ಬಸ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಸುಮಾರು 4.25ರ ಹೊತ್ತಿಗೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಉಗ್ರರ ದಾಳಿಗೆ ಸಿಐಎಸ್ಎಫ್ ಯೋಧರು ಪ್ರತಿ ದಾಳಿ ನಡೆಸಿದ್ದು, ಉಗ್ರರು ತತ್ಕ್ಷಣ ಕಾಲ್ಕಿತ್ತಿದ್ದಾರೆ. ಆದರೆ ಓರ್ವ ಸಿಬಂದಿ ಪ್ರಾಣ ಕಳೆದುಕೊಂಡು, ಇಬ್ಬರು ಗಾಯಗೊಂಡಿದ್ದಾರೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಬ್ಬರು ಉಗ್ರರ ಹತ್ಯೆ
ಜಮ್ಮು ನಗರದ ಸುಂಜ್ವಾನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಇಂದು ಮುಂಜಾನೆ ಇಬ್ಬರು ಭಯೋತ್ಪಾದಕರನ್ನು ಎನ್ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ. ಈ ವೇಳೆ ನಡೆದ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಭದ್ರತಾ ಅಧಿಕಾರಿ ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.