ರಾಯಚೂರು, ಏ 21 (DaijiworldNews/DB): ವಿಚಾರಣೆಗೆ ಕರೆತರುವ ವೇಳೆ ಮೂವರು ವಿಚಾರಣಾಧೀನ ಕೈದಿಗಳು ತಪ್ಪಿಸಿಕೊಂಡು ಘಟನೆ ಇಲ್ಲಿನ 2ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಹರ್ಷ, ಇಷ್ರಾಮ್ ಹಾಗೂ ಪಲ್ಲು ಗೋವಿಂದ ತಪ್ಪಿಸಿಕೊಂಡ ಆರೋಪಿಗಳು. ಮೂವರೂ ಪರಾರಿಯಾಗಿದ್ದು, ಇದೀಗ ಅವರಿಗಾಗಿ ಹುಡುಕಾಟ ನಡೆಯುತ್ತಿದೆ.
2017ರಲ್ಲಿ ಮಾನ್ವಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ ಮೂರನೇ ಆರೋಪಿ ಮೊದಲಿನಿಂದಲೂ ತಲೆ ಮರೆಸಿಕೊಂಡಿದ್ದರೆ, ಉಳಿದ ಆರು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ವಿಚಾರಣೆಗಾಗಿ ಅವರನ್ನು ನ್ಯಾಯಾಲಯಕ್ಕೆ ಕರೆ ತರುವ ವೇಳೆ ವಿಚಾರಣೆ ಬಳಿಕ ಮೂತ್ರಕ್ಕೆ ಹೋಗುವುದಾಗಿ ಹೇಳಿ ಪರಾರಿಯಾಗಿದ್ದಾರೆ.