ಬೆಂಗಳೂರು, ಏ 21 (DaijiworldNews/MS): ಕಮಿಷನ್ ಪ್ರಕರಣದ ಆರೋಪಿಗಳಾದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಪಿಎಸ್ಐ ಪರೀಕ್ಷೆ ಅಕ್ರಮದ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರನ್ನು ಬಂಧಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕವು, ‘ಶೇ 40 ಕಮಿಷನ್ ಹಗರಣದ ಆರೋಪಿ ಈಶ್ವರಪ್ಪನವರ ಬಂಧನ ಆಗಿಲ್ಲ. ಪಿಎಸ್ಐ ಪರೀಕ್ಷೆ ಅಕ್ರಮದ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಬಂಧನವೂ ಆಗಿಲ್ಲ. ದಿವ್ಯಾ ಹಾಗರಗಿಯನ್ನು ಹುಡುಕಲಾಗದಷ್ಟು ಪೊಲೀಸರು ಅಸಮರ್ಥರೇನಲ್ಲ’ ಎಂದು ಹೇಳಿದೆ.
‘ಈ ಮಟ್ಟಿಗೆ ಆರೋಪಿಗಳ ರಕ್ಷಣೆಗೆ ನಿಂತಿರುವವರು ಯಾರು? ಏಕೆ? ದೊಡ್ಡವರ ಹೆಸರುಗಳು ಬಯಲಾಗುವ ಭಯವೇ? ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಉತ್ತರಿಸುವರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.