ಬೆಂಗಳೂರು, ಏ 21 (DaijiworldNews/DB): ಹುಬ್ಬಳ್ಳಿ ಗುಂಪು ಗಲಭೆಯ ಹಿಂದೆ ಬಿಜೆಪಿಯ ನೇರ ಕೈವಾಡವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂ ಗುರುವಾರ ಮಾತನಾಡಿದ ಅವರು, ಶೇ.40ರಷ್ಟು ಕಮಿಷನ್ ಆರೋಪದ ವಿಚಾರವನ್ನು ಬೇರೆಡೆ ತಿರುಗಿಸಲು ಬಿಜೆಪಿಯವರೇ ವಿವಾದಿತ ಪೋಸ್ಟ್ ನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಈ ಕುರಿತು ತನಿಖೆಯಾದರೆ ಸತ್ಯ ಹೊರಬರುತ್ತದೆ ಎಂದರು.
ಹುಬ್ಬಳ್ಳಿಯಲ್ಲಿ ಕೆಲವು ಕಿಡಿಗೇಡಿಗಳು ಗಲಾಟೆ ಸೃಷ್ಟಿಸಿದಾಗ ಪೊಲೀಸರ ಮನವಿ ಮೇರೆಗೆ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ತೆರಳಿ ಶಾಂತಿ ಕಾಪಾಡುವಂತೆ ಅವರಿಗೆ ಮನವಿ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಅವರು ಗಲಭೆ ಸೃಷ್ಟಿಸಿದವರ ಮನವೊಲಿಸಲು ಯತ್ನಿಸಿದಾಗ ಅವರಿಗೂ ಹೊಡೆದಿದ್ದಾರೆ. ಆದರೂ ಬಿಡದೆ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಬಿಜೆಪಿಯ ಕುಮ್ಮಕ್ಕಿನಿಂದಾಗಿ ಈ ಗಲಭೆ ನಡೆದಿದೆ ಎಂದವರು ಆಪಾದನೆ ಮಾಡಿದರು.
ಬಿಜೆಪಿಯು ಗಲಭೆಗೆ ಕಾಂಗ್ರೆಸ್ ಕಾರಣ ಎಂದು ಸುಳ್ಳು ಸುದ್ದಿ ಹರಡುತ್ತಿದೆ. ಆ ಮೂಲಕ ಶೇ.40ರಷ್ಟು ಕಮಿಷನ್ ಹಗರಣದಿಂದ ಜನರನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿರುವುದು ಸ್ಪಷ್ಟ. ಮೊದಲು ಬಿಜೆಪಿಯವರ ತನಿಖೆ ನಡೆಯಲಿ ಎಂದು ಇದೇ ವೇಳೆ ಅವರು ಆಗ್ರಹಿಸಿದರು.