ನವದೆಹಲಿ, ಏ 21 (DaijiworldNews/DB): ಥರ್ಮಲ್ ವಿದ್ಯುತ್ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆಯಾಗುತ್ತಿರುವ ಕಾರಣ ದೇಶದಲ್ಲಿ ವಿದ್ಯುತ್ ಕ್ಷಾಮ ತಲೆದೋರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ.
ದೇಶಾದ್ಯಂತ 150 ಥರ್ಮಲ್ ಘಟಕಗಳಲ್ಲಿ ದೇಶೀಯ ಕಲ್ಲಿದ್ದಲನ್ನು ಬಳಕೆ ಮಾಡಲಾಗುತ್ತದೆ. ಈ ಪೈಕಿ 81ರಲ್ಲಿ ದಾಸ್ತಾನು ಕಡಿಮೆ ಇದೆ. ಖಾಸಗಿ ಘಟಕಗಳಲ್ಲಿಯೂ ದಾಸ್ತಾನು ದೊಡ್ಡ ಮಟ್ಟದಲ್ಲಿ ಇಲ್ಲ ಎಂಬುದಾಗಿ ಭಾರತದ ಕೇಂದ್ರ ವಿದ್ಯುತ್ ಪ್ರಾಧಿಕಾರದ ದೈನಂದಿನ ವರದಿಯಲ್ಲಿ ಕಂಡು ಬಂದಿದದೆ ಎಂಬುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಸದ್ಯ 9 ದಿನಗಳಿಗಾಗುವಷ್ಟು ಕಲ್ಲಿದ್ದಲು ಲಭ್ಯವಿದ್ದು, ಏಪ್ರಿಲ್ ತಿಂಗಳಾಂತ್ಯಕ್ಕೆ ವಿದ್ಯುತ್ ಕೊರತೆ ತಲೆದೋರುವ ಸಾಧ್ಯತೆ ಇದೆ. ಅಷ್ಟರೊಳಗೆ ಸಮಸ್ಯೆ ನಿವಾರಣೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಬಿಗಡಾಯಿಸಲಿದೆ ಎಂದು ಅಖಿಲ ಭಾರತ ವಿದ್ಯುತ್ ಅಭಿಯಂತರರ ಫೆಡರೇಷನ್ ನ ಅಧ್ಯಕ್ಷ ಶೈಲೇಂದ್ರ ದುಬೆ ಹೇಳಿದ್ದಾರೆ.
ಸಾಮಾನ್ಯವಾಗಿ ಕನಿಷ್ಠ 26 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲನ್ನು ಮುಂಗಡವಾಗಿ ದಾಸ್ತಾನು ಇರಿಸಿಕೊಳ್ಳಬೇಕು. ಆದರೆ ಉತ್ತರ ಪ್ರದೇಶದಲ್ಲಿ 7, ಹರ್ಯಾಣದಲ್ಲಿ 8, ರಾಜಸ್ಥಾನದಲ್ಲಿ 17 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಸದ್ಯ ದಾಸ್ತಾನು ಇದೆ. ಆಂಧ್ರ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್, ಚತ್ತೀಸ್ ಘಢ ಮುಂತಾದೆಡೆಯೂ ಕೊರತೆ ಎದುರಾಗುತ್ತಿದೆ ಎನ್ನಲಾಗುತ್ತಿದೆ.