ಹೈದರಾಬಾದ್, ಏ 21 (DaijiworldNews/DB): ಚಾರ್ಜ್ಗೆ ಇರಿಸಲಾಗಿದ್ದ ವಿದ್ಯುತ್ ಚಾಲಿತ ಸ್ಕೂಟರ್ ಸ್ಪೋಟಗೊಂಡು ವ್ಯಕ್ತಿಯೋರ್ವರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಮೃತಪಟ್ಟವರನ್ನು ಬಿ. ರಾಮಸ್ವಾಮಿ ( 80 ) ಎಂದು ಗುರುತಿಸಲಾಗಿದೆ. ಪತ್ನಿ ಕಮಲಮ್ಮ ಹಾಗೂ ಮಗ ಕಲ್ಯಾಣ್ ಅವರಿಗೆ ಗಂಭೀರ ಗಾಯವಾಗಿದ್ದು, ಸೊಸೆ ಕೃಷ್ಣವೇಣಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಮಸ್ವಾಮಿ ಅವರ ಮಗ ಪ್ರಕಾಶ್ ಎಂಬವರು ಕಳೆದೊಂದು ವರ್ಷದಿಂದ ವಿದ್ಯುತ್ ಚಾಲಿತ ಸ್ಕೂಟರ್ ಬಳಸುತ್ತಿದ್ದಾರೆ. ಬುಧವಾರ ರಾತ್ರಿ 12.30ರ ಸುಮಾರಿಗೆ ಸ್ಕೂಟರ್ನಿಂದ ಬ್ಯಾಟರಿ ತೆಗೆದು ಚಾರ್ಚ್ಗೆ ಹಾಕಿದ್ದರು. ಆದರೆ ಬ್ಯಾಟರಿ ಮುಂಜಾನೆ 4 ಗಂಟೆ ವೇಳೆ ಸ್ಫೋಟಗೊಂಡಿದೆ. ಮನೆಯ ಹಜಾರದಲ್ಲೇ ಮಲಗಿದ್ದ ರಾಮಸ್ವಾಮಿ, ಕಮಲಮ್ಮ, ಕಲ್ಯಾಣ್ ಅವರಿಗೆ ಗಂಭೀರ ಗಾಯವಾಗಿದ್ದು, ತತ್ಕ್ಷಣ ಅವರನ್ನು ಸನಿಹದ ಖಾಸಗಿ ಆಸ್ಪತ್ರೆಗೆ ದಾಖಲಾಯಿತು. ರಾಮಸ್ವಾಮಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ಗೆ ಕರೆದೊಯ್ಯುವ ವೇಳೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಹೈದರಾಬಾದ್ ಮೂಲದ ಸ್ಕೂಟರ್ ತಯಾರಕ ಮತ್ತು ವಿತರಕ ಕಂಪೆನಿ ವಿರುದ್ಧ ಐಪಿಸಿಯ 304ಎ (ಬೇಜವಾಬ್ದಾರಿಯಿಂದ ಸಾವಿಗೆ ಕಾರಣ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಿಜಾಮಾಬಾದ್ನ ಸಹಾಯಕ ಪೊಲೀಸ್ ಆಯುಕ್ತ ಎ.ವೆಂಕಟೇಶ್ವರುಲು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.