ಬೆಂಗಳೂರು, ಏ 21 (DaijiworldNews/MS): ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಇಡಲು ಮುಂದಾಗಿರುವ ರಾಜ್ಯ ಸರ್ಕಾರ ವಿರುದ್ದ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ, "ಶಿವಮೊಗ್ಗಕ್ಕೆ ಶ್ರೀ ಯಡಿಯೂರಪ್ಪನವರ ಹೊರತಾಗಿ ಇತರರ ಕೊಡುಗೆ ನೆನಪಾಗಲಿಲ್ಲವೇ?" ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್ ಯಡಿಯೂರಪ್ಪನವರ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಶಿವಮೊಗ್ಗಕ್ಕೆ ಶ್ರೀ ಯಡಿಯೂರಪ್ಪನವರ ಹೊರತಾಗಿ ಇತರರ ಕೊಡುಗೆ ನೆನಪಾಗಲಿಲ್ಲವೇ? ಈ ನಾಡಿನ ಸಮಾನತಾವಾದಿ ಬಸವಣ್ಣರ ಕೊಡುಗೆ ಅಥವಾ ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಕುವೆಂಪುರ ಕೊಡುಗೆ ಕಾಣದಾಯಿತೇ? ಗೇಣಿ ರೈತರ ಹಕ್ಕಿನ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಕೊಡುಗೆಗಳು ಕಣ್ಮರೆಯಾದವೇ? ಕಡಿದಾಳ್ ಮಂಜಪ್ಪನವರ ಹೋರಾಟದ ಬದುಕು, ಹಿಂದುಳಿದ ವರ್ಗಗಳ ಹರಿಕಾರ ಬಂಗಾರಪ್ಪನವರ ಕೊಡುಗೆಗಳು ಮರೆತು ಹೋಯಿತೇ? ಮಲೆನಾಡಿನ ಐತಿಹಾಸಿಕ ಹೆಗ್ಗುರುತುಗಳಾದ ಶಿವಪ್ಪನಾಯಕ, ಕೆಳದಿ ಚೆನ್ನಮ್ಮ, ಬೂದಿ ಬಸಪ್ಪನಾಯಕರ ಮರೆತು ಹೋದರೇ?" ಎಂದು ಪ್ರಶ್ನಿಸಿದ್ದಾರೆ.
"ಈ ನಾಮಕರಣ ಪ್ರಯತ್ನವು ಅಲುಗಾಡುತ್ತಿರುವ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲೋ?ಅಥವಾ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ ಪಶ್ಚಾತಾಪಕ್ಕೋ? ಅಥವಾ ಅವರನ್ನು ಮಾರ್ಗದರ್ಶಕ ಮಂಡಳಿಗೆ ಕಳಿಸುತ್ತಿರುವುದಕ್ಕೆ ನೀಡುತ್ತಿರುವ 'ಸಮಾಧಾನಕರ ಬಹುಮಾನ'ವೇ? ಈ ಎಲ್ಲಾ ಪ್ರಶ್ನೆಗಳಿಗೆ ಸಿಎಂ ಬೊಮ್ಮಾಯಿಯವರಿಂದ ಉತ್ತರ ನೀಡುವರೇ ಅಥವಾ ತಮ್ಮ ಗುರುಗಳಾದ ಮೋದಿಯವರಂತೆ ಮೌನವಹಿಸುವರೇ? ಅನುಮಾನವಿದೆ. ಏಕೆಂದರೆ, ಸಿಎಂ ಅವರೂ ಸಹ ಪ್ರಧಾನಿ ಮೋದಿಯವರಂತೆಯೇ "ಮಾತನಾಡಬೇಕಿದ್ದಕ್ಕೆ ಮೌನ, ಅಗತ್ಯವಿಲ್ಲದಕ್ಕೆ ಮಾತು" ಎಂಬುದನ್ನು ಪಾಲಿಸುತ್ತಾ ತಾವು ಜನತೆಗೆ ಉತ್ತರದಾಯಿಗಳಲ್ಲ ಎಂಬ ಮನಸ್ಥಿತಿಗೆ ಜಾರಿದ್ದಾರೆ" ಎಂದು ಟೀಕಿಸಿದ್ದಾರೆ.