ಬೆಂಗಳೂರು, ಏ 21 (DaijiworldNews/HR): ಅರ್ಥಹೀನ ಹೇಳಿಕೆಗಳಿಂದಲೇ ಅಪಖ್ಯಾತಿಗಳಿಸಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮತ್ತೊಮೆ ಅರ್ಥಹೀನ ಮಾತನಾಡಿದ್ದಾರೆ. ದೇಶದ ಚಿಲ್ಲರೆ ಹಣದುಬ್ಬರ ದರ 17 ತಿಂಗಳ ಗರಿಷ್ಟ ಮಟ್ಟ ತಲುಪಿದೆ. ಸಗಟು ಹಣದುಬ್ಬರ ದರ 4 ತಿಂಗಳ ಗರಿಷ್ಠ ಮಟ್ಟ ತಲುಪಿದೆ.ಇಷ್ಟಾದರೂ ಹಣದುಬ್ಬರ ಅತಿಯಾಗಿ ಏರಿಕೆಯಾಗಿಲ್ಲ ಎಂದರೆ ಏನರ್ಥ? ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಏರುತ್ತಿರುವ ಸಗಟು ಹಣದುಬ್ಬರ ಭವಿಷ್ಯದಲ್ಲಿ ಚಿಲ್ಲರೆ ಹಣದುಬ್ಬರದ ಮೇಲೂ ನೇರ ಪರಿಣಾಮ ಬೀರಲಿದೆ.ಈಗಾಗಲೇ ಬೆಲೆಯೇರಿಕೆಯಿಂದ ಜನಸಾಮಾನ್ಯ ತತ್ತರಿಸಿದ್ದಾನೆ. ಹಣದುಬ್ಬರ ಹೀಗೆ ಏರುತ್ತಿದ್ದರೆ ಜನರ ಬದುಕು ಏನಾಗಬೇಕು? ಹಣದುಬ್ಬರದ ಬಗ್ಗೆ ಆರ್ಥಿಕ ತಜ್ಞರ ಆತಂಕ ಭಾರತದ ಮಟ್ಟಿಗೆ ಎಚ್ಚರಿಕೆಯ ಕರೆಗಂಟೆ.ಅರ್ಥ ಸಚಿವರು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ.
ಇನ್ನು ಹಣದುಬ್ಬರ ನಿಯಂತ್ರಿಸಲು ಆರ್ ಬಿಐ ಕೂಡ ಹೆಣಗಾಡುತ್ತಿದೆ. ಹೀಗಿರುವಾಗ ನಿರ್ಮಲಾ ಸೀತಾರಾಮನ್, ಅವಾಸ್ತವಿಕ ಅಂಕಿ ಅಂಶಗಳ ಮೂಲಕ ದೇಶದ ದಾರಿ ತಪ್ಪಿಸಬಾರದು. ಬಹುಶಃ ಅರ್ಥಸಚಿವರಿಗೆ ಹಣಕಾಸು ಇಲಾಖೆಯ ಮಹತ್ವವೇ ಗೊತ್ತಿಲ್ಲ. ಆರ್ಥಿಕ ನಿರ್ವಹಣೆ ಪೂರ್ವಾಶ್ರಮದಲ್ಲಿ ಟಿವಿ ಡಿಬೇಟ್ಗಳ ಪ್ಯಾನೆಲಿಸ್ಟ್ ಆಗಿ ಕೂಗಿದಷ್ಟು ಸರಳವಲ್ಲ ಎಂದು ಸಚಿವೆ ತಿಳಿದುಕೊಳ್ಳಲಿ ಎಂದು ಹೇಳಿದ್ದಾರೆ.