ಬೆಂಗಳೂರು, ಏ 21 (DaijiworldNews/DB): ವಿಶಾಲ್ ಏಪ್ರಿಲ್ 26ರಂದು ನನ್ನ ಮದುವೆ ಇದೆ. ನಿನ್ನನ್ನು ನಾನು ಪ್ರೀತಿಸುತ್ತೇನೆ. ದಯವಿಟ್ಟು ನಾವು ಎಲ್ಲಿಗಾದರೂ ಓಡಿ ಹೋಗೋಣ..ನಿನ್ನ ಕುಸುಮ್’ ಯುವತಿಯೋರ್ವಳು ತನ್ನ ಪ್ರಿಯಕರನಿಗೆ 10 ರೂ. ನೋಟಿನಲ್ಲಿ ಬರೆದ ಈ ಪ್ರೇಮ ಸಂದೇಶ ಸದ್ಯ ವೈರಲ್ ಆಗುತ್ತಿದೆ.
ಇನ್ನೇನು ಐದಾರು ದಿನಗಳಲ್ಲಿ ಇಷ್ಟವಿಲ್ಲದಿದ್ದರೂ ಬೇರೊಬ್ಬನೊಂದಿಗೆ ಹಸೆಮಣೆ ಏರುವ ಅನಿವಾರ್ಯದಲ್ಲಿ ಸಿಲುಕಿಕೊಂಡಿರುವ ಕುಸುಮ್ ಎಂಬಾಕೆ ತಾನು ಪ್ರೀತಿಸಿದ ಹುಡುಗನನ್ನು ಸೇರಲು ಕೊನೆ ಕ್ಷಣದ ಪ್ರಯತ್ನವೆಂಬಂತೆ 10 ರೂ. ನೋಟಿನ ಮೇಲೆ ಪ್ರೇಮ ಸಂದೇಶ ಬರೆದು ತನ್ನ ಮನದಾಳವನ್ನು ನಿವೇದಿಸಿಕೊಂಡಿದ್ದಾಳೆ. ಆಕೆ ಪ್ರೇಮ ಸಂದೇಶವನ್ನು ಹಿಂದಿಯಲ್ಲಿ ಬರೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸಂದೇಶ ಸಖತ್ ವೈರಲ್ ಆಗುತ್ತಿದೆ.
ವಿಪುಲ್ ಎಂಬವರು ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್ ಹೆಸರುಗಳಿಗೂ ಟ್ಯಾಗ್ ಮಾಡಿ. ಕುಸುಮ್ ಪ್ರಿಯಕರ ಯಾರಾದರೂ ಇದ್ದರೆ ಈ ಮೂಲಕವಾದರೂ ಅವರಿಗೆ ಈ ಸಂದೇಶ ತಲುಪಲಿ ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.