ಮುಂಬೈ, ಏ 21 (DaijiworldNews/MS): ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ಜನರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ನಟ ಅಕ್ಷಯ್ ಕುಮಾರ್ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ಕ್ಷಮೆಯಾಚಿಸಿ ಗುಟ್ಕಾ ಜಾಹೀರಾತಿನಿಂದ ಹಿಂದೆ ಸರಿದಿದ್ದಾರೆ.
ಇಂದು ಬೆಳಿಗ್ಗೆ ಅವರು ಈ ಕುರಿತು ಸುದೀರ್ಘ ಪತ್ರ ಬರೆದಿದ್ದು, ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದು 'ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆ ನನ್ನನ್ನು ಆಳವಾಗಿ ಪ್ರಭಾವಿಸಿದೆ. ನಾನು ತಂಬಾಕನ್ನು ಅನುಮೋದಿಸಿಲ್ಲ ನಿಮ್ಮ ಭಾವನೆಗಳನ್ನ ಗೌರವಿಸುತ್ತೇನೆ. ವಿಮಲ್ ಪಾನ್ ಮಸಾಲ ಹಿಂದೆ ಸರಿಯುತ್ತೇನೆ' ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಖ್ಯಾತ ನಟ ಅಕ್ಷಯ್ ಕುಮಾರ್ ಬಾಲಿವುಡ್ ನ ಅತ್ಯಂತ ಬೇಡಿಕೆಯುಳ್ಳ ಸೆಲೆಬ್ರಿಟಿಗಳ ಪೈಕಿ ಪ್ರಮುಖರು. ಅಕ್ಷಯ್ ಕುಮಾರ್ ನಟನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅವರ ಸಾಮಾಜಿಕ ಕಳಕಳಿ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಇತ್ತೀಚೆಗೆ ನಡೆದ ಬೆಳವಣಿಗೆಯೊಂದು ಅಕ್ಷಯ್ ಕುಮಾರ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ಅಭಿಯಾನ ಆರಂಭವಾಗುವಂತೆ ಮಾಡಿತ್ತು.
ಹಣ ಮಾಡುವುದಕ್ಕಾಗಿ ಗುಟ್ಕಾ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದ ಅಕ್ಷಯ್ ಕುಮಾರ್ ಅವರ ಹಳೆ ವಿಡಿಯೋ ಒಂದನ್ನು ನೆಟ್ಟಿಗರು ಹಂಚಿಕೊಂಡು ಅವರ ಕಿವಿ ಹಿಂಡಿದ್ದರು. ಈ ಹಿನ್ನಲೆಯಲ್ಲಿ ಮಹತ್ಚದ ನಿರ್ಧಾರ ಕೈಗೊಂಡಿರುವ ಅಕ್ಷಯ್ ಕುಮಾರ್, ಮುಂದಿನ ದಿನಗಳಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಪಾಲ್ಗೊಳ್ಳದಿರುವ ನಿರ್ಧಾರಕ್ಕೆ ಬಂದಿದ್ದಾರೆ.
ವಿಮಲ್ ಜಾಹೀರಾತಿನಲ್ಲಿ ಅಕ್ಷಯ್ ಕುಮಾರ್ ಜೊತೆ ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಕೂಡಾ ನಟಿಸಿದ್ದು ಈ ಬಗ್ಗೆಯೂ ವಿರೋಧ ಕೇಳಿಬಂದಿದೆ.