ಅಹಮದಾಬಾದ್, ಏ 20 (DaijiworldNews/DB): ಯುವತಿಯನ್ನು ಪುಸಲಾಯಿಸಿ ಆಕೆಯೊಂದಿಗೆ ಪರಾರಿಯಾಗಿದ್ದ ವಿವಾಹಿತನೋರ್ವನಿಗೆ ಆಕೆಯನ್ನು ಹುಡುಕಲು ಸರ್ಕಾರ ಭರಿಸಿದ ವೆಚ್ಚದ ಅರ್ಧ ಭಾಗದಷ್ಟು ನೀಡುವಂತೆ ಗುಜರಾತ್ ಹೈಕೋರ್ಟ್ ಆದೇಶಿಸಿದೆ.
ಏಳು ತಿಂಗಳ ಹಿಂದೆ ಆರೋಪಿ ರಘಭಾಯ್ ಪರ್ಮಾರ್ ಜತೆ 20 ವರ್ಷದ ಯುವತಿ ಪರಾರಿಯಾಗಿದ್ದಳು. ಮಗಳ ಪತ್ತೆಗಾಗಿ ಯುವತಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಕೋರ್ಟ್ ಪೊಲೀಸರಿಗೆ ಆದೇಶ ನೀಡಿದ್ದ ಕಾರಣ ಇವರಿಬ್ಬರನ್ನು ಹುಡುಕಾಡಲು ಪೊಲೀಸರು ಸಾಕಷ್ಟು ಶ್ರಮ ಪಟ್ಟಿದ್ದರು. ಆದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಏಳು ತಿಂಗಳ ಬಳಿಕ ಪತ್ತೆಯಾದ ಜೋಡಿಯನ್ನು ಮರಳಿ ಕರೆ ತರಲಾಗಿತ್ತು.
ಇಬ್ಬರ ಹುಡುಕಾಟ, ಕೋರ್ಟ್ ಸೇರಿದಂತೆ ವಿವಿಧೆಡೆಗೆ ಅಲೆದಾಟ, ಯುವತಿಯನ್ನು ಮರಳಿ ಅವರ ಕುಟುಂಬಕ್ಕೆ ಒಪ್ಪಿಸುವಿಕೆ ಸೇರಿ ಒಟ್ಟು 1,17,500 ರೂ. ಖರ್ಚಾಗಿದೆ ಎಂದು ಪೊಲೀಸರು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಒಟ್ಟು ಖರ್ಚಾದ ಮೊತ್ತದಲ್ಲಿ ಅರ್ಧದಷ್ಟು ಹಣವನ್ನು ಯುವಕನೇ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿದೆ. ಅಲ್ಲದೆ ಅವಿವಾಹಿತ ಯುವತಿಯ ಷೋಷಣೆ ಮಾಡಿದ್ದಕ್ಕೆ ಆರೋಪಿಗೆ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿದೆ.