ನವದೆಹಲಿ, ಏ 20 (DaijiworldNews/MS): ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಭಾರತದಾದ್ಯಂತ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಸಂಸ್ಥೆಗಳಲ್ಲಿ ಪ್ಲಂಬಿಂಗ್ ಕೋರ್ಸ್ ಅನ್ನು ಪರಿಚಯಿಸಲು ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ (ಐಪಿಎ) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರವಾಗಿ ಎಐಸಿಟಿಇ ಅಧ್ಯಕ್ಷ ಅನಿಲ್ ಡಿ ಸಹಸ್ರಬುಧೆ ಮತ್ತು ಐಪಿಎ ರಾಷ್ಟ್ರೀಯ ಅಧ್ಯಕ್ಷ ಗುರ್ಮಿತ್ ಸಿಂಗ್ ಅರೋರಾ ನಡುವೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶೇ 80ರಷ್ಟು ಭೌತಿಕ, ಶೇ 20 ಪ್ರಾಯೋಗಿಕ ಅಧ್ಯಯನ ಇರುವಂತೆ ಒಟ್ಟು 50 ಗಂಟೆ ಅವಧಿಯ ಕೋರ್ಸ್ ರೂಪಿಸಲಾಗುತ್ತದೆ. ಒಪ್ಪಂದದ ಅನುಸಾರ ಎಂಜಿನಿಯರಿಂಗ್, ವಾಸ್ತುಶಿಲ್ಪ, ಒಳಾಂಗಣ ವಿನ್ಯಾಸ ಕೋರ್ಸ್ ವಿದ್ಯಾರ್ಥಿಗಳು, ಸಿವಿಲ್, ಪರಿಸರ ಎಂಜಿನಿಯರಿಂಗ್, ಮೆಕಾನಿಕಲ್ ಎಂಜಿನಿಯರಿಂಗ್, ಒಳಾಂಗಣ ವಿನ್ಯಾಸದ ಪದವಿ ವಿದ್ಯಾರ್ಥಿಗಳು ಪ್ಲಂಬಿಂಗ್ (ನೀರು ಮತ್ತು ಒಳಚರಂಡಿ) ವಿಷಯ ಕುರಿತು ನಾಲ್ಕು ಕ್ರೆಡಿಟ್ ಕೋರ್ಸ್ ತೆಗೆದುಕೊಳ್ಳಬಹುದಾಗಿದೆ.
ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಪಠ್ಯಕ್ರಮದಲ್ಲಿ ಪ್ಲಂಬಿಂಗ್ ಕೋರ್ಸ್ ಪಠ್ಯಕ್ರಮವಾಗಿ ಅಭ್ಯಾಸಿಸುವುದು ಅವಶ್ಯಕತೆಯಿದೆ. ಏಕೆಂದರೆ ಪ್ಲಂಬಿಂಗ್ ಒಂದು ಕಟ್ಟಡದ ಸದೃಢತೆಗೆ ಕಾರಣವಾಗುತ್ತದೆ ಎಂದು ಅರೋರಾ ಹೇಳಿದ್ದಾರೆ.