ನವದೆಹಲಿ, ಏ 20 (DaijiworldNews/DB): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ವಿರುದ್ದ ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರ ವಿರುದ್ಧ ಪಂಜಾಬ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ಪ್ರಚೋದನಕಾರಿ ಹೇಳಿಕೆ ಮೂಲಕ ಗುಂಪುಗಳ ನಡುವೆ ದ್ವೇಷಕ್ಕೆ ಕಾರಣವಾಗುವಂತೆ ಮಾತನಾಡುವ ಆರೋಪದ ಮೇಲೆ ದೂರು ದಾಖಲಾಗಿದೆ. ಏಪ್ರಿಲ್ 26ಕ್ಕೂ ಮೊದಲು ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಅಲ್ಲದೆ ನಿಗದಿತ ದಿನಾಂಕದೊಳಗೆ ವಿಚಾರಣೆಗೆ ಹಾಜರಾಗದೇ ಇದ್ದಲ್ಲಿ ಅವರನ್ನು ಬಂಧಿಸಲು ಕಾನೂನು ಪ್ರಕಾರ ಅವಕಾಶವಿದೆ ಎಂದು ರೂಪನಗರದ ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಗಾರ್ಗ್ ಅವರು ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಈ ಕುರಿತು ಟ್ವೀಟರ್ನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರ್ ವಿಶ್ವಾಸ್, ಪೊಲೀಸರು ಇಂದು ಬೆಳಗ್ಗೆ ನನ್ನ ಮನೆ ಬಾಗಿಲಿಗೆ ಬಂದಿದ್ದಾರೆ. ಮುಂದೊಂದು ದಿನ ಪಂಜಾಬ್ ಸಿಎಂ ಅವರಿಗೂ ಕೇಜ್ರೀವಾಲ್ ದ್ರೋಹ ಮಾಡುತ್ತಾರೆ ಎಂಬುದು ನೆನಪಿರಲಿ ಎಂದಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಕೇಜ್ರೀವಾಲ್ ವಿರುದ್ದ ಕುಮಾರ್ ವಿಶ್ವಾಸ್ ಮಾತನಾಡಿ, ಅವರು ಸ್ವತಂತ್ರ ರಾಷ್ಟ್ರವಾದ ಖಲಿಸ್ತಾನದ ಪ್ರಧಾನಿಯಾಗಲು ಬಯಸುತ್ತಾರೆ ಎಂದಿದ್ದರು. ಈ ಸಂಬಂಧ ಎಎಪಿ ಕಾರ್ಯಕರ್ತರೊಬ್ಬರು ಪೊಲೀಸ್ ದೂರು ನೀಡಿದ್ದರು.