ಮೈಸೂರು, ಏ 20 (DaijiworldNews/DB): ಕಾರ್ಪೋರೇಟ್ ಪರ ಇರುವ ಪ್ರಧಾನಿ ನರೇಂದ್ರ ಮೋದಿಯವರು ಅದಾನಿ, ಅಂಬಾನಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದವರು ದೇಶದ ಸಾಲ ದುಪ್ಪಟ್ಟು ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ರೈತರ ಆದಾಯ ಹೆಚ್ಚಳ ಮಾಡುವ ಭರವಸೆ ನೀಡಿದ್ದರು. ಆದರೆ ಸ್ವಾತಂತ್ರ್ಯ ದೊರಕಿ 75 ವರ್ಷ ಆಗುವಷ್ಟರಲ್ಲಿ ದೇಶದ ಸಾಲವನ್ನೇ ಹೆಚ್ಚಳ ಮಾಡಿದ್ದಾರೆ. ರೈತರ ಜೇಬಿನಿಂದ ದೋಚಿರುವುದೇ ಅವರ ಸಾಧನೆಯೂ ಆಗಿದೆ ಎಂದರು.
ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಶೇ. 35 ಇದ್ದ ಕಾರ್ಪೋರೇಟ್ ಟ್ಯಾಕ್ಸ್ ಪ್ರಸ್ತುತ ಶೇ. 23ಕ್ಕೆ ಇಳಿದಿದೆ. ಇದರಿಂದ ಕೇಂದ್ರಕ್ಕೆ 5 ಲಕ್ಷ ಕೋಟಿ ರೂ. ಕಡಿಮೆ ಆದಾಯ ಬರುವಂತಾಗಿದೆ. ಅದಾನಿ, ಅಂಬಾನಿಗೆ ಲಾಭ ಮಾಡಿಕೊಡುವುದೇ ಇವರ ಉದ್ದೇಶವಾಗಿದೆ. ನಾನು ಹೇಳಿದ್ದು ಸುಳ್ಳು ಎಂದಾದರೆ ಒಂದೇ ವೇದಿಕೆಯಲ್ಲಿ ಸೇರಿ ಚರ್ಚೆ ಮಾಡೋಣ ಎಂದು ಮೋದಿಯವರನ್ನು ಚರ್ಚೆಗೆ ಆಹ್ವಾನಿಸಿದರು.
ದೇಶದ ಸಾಲ 53.11ಲಕ್ಷ ಕೋಟಿಯಿಂದ 152 ಲಕ್ಷ ಕೋಟಿ ರೂ.ಗಳಾಗಿವೆ. ಉದ್ಯೋಗ ನಷ್ಟ, ನಿರುದ್ಯೋಗದಿಂದ ಜನ ತತ್ತರಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ನಿರಂತರವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದೆ. ವಿಶ್ವಾಸವಿಟ್ಟು ಮತ ನೀಡಿದ ಯುವಕರ ತಲೆ ಮೇಲೆ ಚಪ್ಪಡಿ ಎಳೆದು ಬಿಟ್ಟಿರಲ್ಲ ಮೋದೀಜಿ ಎಂದು ಲೇವಡಿ ಮಾಡಿದರು.