ದಾವಣಗೆರೆ, ಏ 20 (DaijiworldNews/DB): ರಾಜ್ಯದ ಯಾವುದೇ ಭಾಗದಲ್ಲಿ ಕೋಮು ಸಾಮರಸ್ಯ ಕದಡುವ ಘಟನೆಗಳು ನಡೆದರೆ ಅದರ ಹಿಂದೆ ಕಾಂಗ್ರೆಸ್ ಪಕ್ಷದ ಕರಿ ನೆರಳು ಇರುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ಕಾವೇರಿ ಗಲಾಟೆ ವೇಳೆ ಚನ್ನಪಟ್ಟಣ, ರಾಮನಗರದಲ್ಲಿ ಗಲಾಟೆ ಮಾಡಿಸಿದವರು ಅವರೇ. ಹುಬ್ಬಳ್ಳಿ ಗಲಭೆಯಲ್ಲೂ ಅವರ ಕೈವಾಡ ಕಂಡು ಬರುತ್ತಿದೆ. ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆಯ ಬಗ್ಗೆ ಏನೂ ಗೊತ್ತಿಲ್ಲ ಎಂದವರ ಕೈವಾಡ ಇರುವುದು ಆಮೇಲೆ ಸ್ಪಷ್ಟವಾಗಿತ್ತು. ಒಟ್ಟಿನಲ್ಲಿ ಬಿಜೆಪಿಗೆ ಕೆಟ್ಟ ಹೆಸರು ತಂದು ಕೋಮು ಸೌಹಾರ್ದ ಕೆಡಿಸಿ ಖುಷಿ ಪಡುವುದೇ ಅವರ ನಿತ್ಯದ ಕೆಲಸವಾಗಿದೆ ಎಂದರು.
ಅಲ್ಪಸಂಖ್ಯಾಕರು ಏನೇ ಮಾಡಿದರೂ ಓಟ್ ಬ್ಯಾಂಕ್ಗಾಗಿ ಅವರ ಪರ ನಿಲ್ಲುತ್ತಾರೆ. ಗಲಭೆ ಸೃಷ್ಟಿಸಿದ ಆರೋಪಿಗಳನ್ನೇ ತಂದು ವೇದಿಕೆ ಮೇಲೆ ಕುಳ್ಳಿರಿಸುತ್ತಾರೆ. ಕಾನೂನಿನ ಮೇಲೆ ಅವರಿಗೆ ನಂಬಿಕೆಯೇ ಇಲ್ಲದಾಗಿದೆ ಎಂದು ಇದೇ ವೇಳೆ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ದಿಂಗಾಲೇಶ್ವರ ಸ್ವಾಮೀಜಿಯವರ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಯಾವುದೇ ಪಕ್ಷಗಳ ಏಜೆಂಟ್ಗಳಂತೆ ಮಾತನಾಡಬಾರದು. ದಾಖಲೆ ಇಟ್ಟುಕೊಂಡು ಮಾತನಾಡಬೇಕೇ ಹೊರತು ಸುಖಾಸುಮ್ಮನೆ ಆರೋಪ ಹೊರಿಸುವುದು ಸರಿಯಲ್ಲ ಎಂದರು.