ಹಾಸನ, ಏ 20 (DaijiworldNews/DB): ದೇವೇಗೌಡರ ಮೇಲೆ ಆಣೆ ಮಾಡಲು ಹೇಳಲು ಸಿದ್ದರಾಮಯ್ಯ ಯಾವೂರ ದಾಸಯ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಬಿಜೆಪಿ ಜೊತೆಗೆ ಮೈತ್ರಿ ಇಲ್ಲ ಎಂಬುದನ್ನು ದೇವೇಗೌಡರ ಮೇಲೆ ಆಣೆ ಮಾಡಿ ಹೇಳಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ ಹಾಗೆ ಹೇಳುವುದಕ್ಕೆ ಅವರು ಯಾವ ಊರಿನ ದಾಸಯ್ಯ ಎಂಬುದನ್ನು ಹೇಳಲಿ. ಸಿದ್ದರಾಮಯ್ಯ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು ಎಂದರು.
ಬೆಜೆಪಿ ಜತೆ ಮೈತ್ರಿಯಿಲ್ಲವೆಂದು ದೇವೆಗೌಡರ ಮೇಲೆ ಆಣೆ ಮಾಡಿ ಹೇಳಲು ಸಿದ್ದರಿದ್ದೀರಾ ಎಂದು ಸಿದ್ದರಾಮಯ್ಯನವರು ಟ್ವೀಟ್ ಮಾಡಿ ಎಚ್ಡಿಕೆ ಅವರ ಕಾಲೆಳೆದಿದ್ದರು. ಇದಕ್ಕೆ ಎಚ್ಡಿಕೆ ಪ್ರತಿಕ್ರಿಯಿಸಿದರು.
ನಮ್ಮನ್ನು ಪದೇಪದೇ ಬಿಜೆಪಿಯ ಬಿ ಟೀಂ ಎನ್ನುವ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಯಾರು ಎಂಬುದನ್ನು ಅರಿತುಕೊಳ್ಳಬೇಕು. ಇಬ್ಬರು ಪಕ್ಷೇತರರನ್ನು ಸಚಿವರನ್ನಾಗಿ ಮಾಡಿ ಸರ್ಕಾರವನ್ನೇ ಕಿತ್ತರು. ಸಮ್ಮಿಶ್ರ ಸರ್ಕಾರ ಪತನವಾಗುವುದಕ್ಕೆ ಸಿದ್ದರಾಮಯ್ಯ ಅವರೇ ಮೂಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ನ ಯೋಗ್ಯತೆಗೆ ರಾಜ್ಯದಲ್ಲಿ 50ರಿಂದ 60 ಸೀಟು ಬಂದರೆ ಅದೇ ದೊಡ್ಡ ವಿಚಾರ ಎಂದು ಕಿಡಿ ಕಾರಿದರು.