ಹೈದರಾಬಾದ್, ಏ 20 (DaijiworldNews/HR): ಬಿಜೆಪಿಯು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತೆ ದೆಹಲಿಯಲ್ಲೂ ಮನೆಗಳನ್ನು ಧ್ವಂಸ ಮಾಡುವ ಮೂಲಕ ಬಡವರ ವಿರುದ್ಧ ಸಮರ ಸಾರಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅತಿಕ್ರಮಣದ ಹೆಸರಿನಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ರೀತಿ ದೆಹಲಿಯಲ್ಲೂ ಮನೆಗಳನ್ನು ಕೆಡವಲು ಬಿಜೆಪಿಯು ಹೊರಟಿದ್ದು, ನೋಟಿಸ್ ಇಲ್ಲ, ನ್ಯಾಯಾಲಯಕ್ಕೆ ಹೋಗಲು ಅವಕಾಶವಿಲ್ಲ, ಬದುಕಿಗಾಗಿ ಹೋರಾಡುತ್ತಿರುವ ಬಡ ಮುಸ್ಲಿಮರನ್ನು ಶಿಕ್ಷಿಸಲಾಗುತ್ತಿದೆ ಎಂದಿದ್ದಾರೆ.
ಇನ್ನು ಇಂತಹ ದ್ರೋಹ ಮತ್ತು ಹೇಡಿತನಕ್ಕಾಗಿ ಜಹಾಂಗೀರ್ಪುರಿಯ ಜನರು ಅವರಿಗೆ ಮತ ಹಾಕಿದ್ದಾರೆಯೇ?! 'ಪೊಲೀಸರು ನಮ್ಮ ನಿಯಂತ್ರಣದಲ್ಲಿಲ್ಲ ಎಂಬ ಅವರು ಆಗಾಗ್ಗೆ ಹೇಳುವ ಮಾತುಗಳು ಇಲ್ಲಿ ಕೆಲಸಕ್ಕೆ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.