ಶಿವಮೊಗ್ಗ, ಏ 20 (DaijiworldNews/DB): ಬಿಜೆಪಿ ಸದಾ ಸಕ್ರಿಯವಾಗಿರುವ ಪಕ್ಷ. ಆದರೆ ಕಾಂಗ್ರೆಸ್, ಜೆಡಿಎಸ್ ಚುನಾವಣೆ ಹತ್ತಿರ ಬಂದಾಗ ತಲೆ ಎತ್ತುವ ಪಕ್ಷಗಳು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತಾನಾಡಿದ ಅವರು, ಆ ಎರಡು ಪಕ್ಷಗಳು ಚುನಾವಣೆ ಮುಗಿಯುತ್ತಿದ್ದಂತೆ ಮಾಯವಾಗುತ್ತವೆ. ಮತ್ತೆ ಬರುವುದು ಚುನಾವಣೆ ಹತ್ತಿರ ಬಂದಾಗಲೇ. ಬಿಜೆಪಿ ಜಾತಿ, ಧರ್ಮದ ಮೇಲೆ ಪಕ್ಷ ಕಟ್ಟುವ ಪಕ್ಷ ಅಲ್ಲ. ರಾಷ್ಟ್ರಭಕ್ತಿಯ ಮೇಲೆ ನಾವು ಪಕ್ಷ ಕಟ್ಟುತ್ತೇವೆ ಎಂದರು.
ಹುಬ್ಬಳ್ಳಿ ಗಲಭೆಯನ್ನು ಪೊಲೀಸರು ಸಶಕ್ತವಾಗಿ ನಿಯಂತ್ರಿಸಿದ್ದಾರೆ. ಸ್ಟೇಟಸ್ ಹಾಕಿದ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಡಾ. ರಾಜ್ಕುಮಾರ್ ಮೃತಪಟ್ಟಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಅವರ ಅಂತಿಮ ಸಂಸ್ಕಾರದ ವೇಳೆ ಸರ್ಕಾರ ಸರಿಯಾದ ವ್ಯವಸ್ಥೆ ಮಾಡದ ಕಾರಣ ಆರು ಜನ ಶೂಟೌಟ್ನಲ್ಲಿ ಸಾವನ್ನಪ್ಪಿದ್ದರು. ಆದರೆ ಪುನಿತ್ ರಾಜ್ಕುಮಾರ್ ಮೃತಪಟ್ಟಾಗ 25 ಲಕ್ಷ ಜನ ಸೇರಿದ್ದರೂ ಯಾವುದೇ ಗೊಂದಲವಿಲ್ಲದೆ ಅವರ ಅಂತಿಮ ಸಂಸ್ಕಾರವನ್ನು ಹೇಗೆ ನಡೆಸಿದೆವು ಎಂಬುದು ತಿಳಿದಿದೆ. ಇದು ನಾವು ಶಕ್ತರೋ, ನಿಶ್ಯಕ್ತರೋ ಎಂಬುದನ್ನು ತಿಳಿಸುತ್ತದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.