ನವದೆಹಲಿ, ಏ 20 (DaijiworldNews/MS): ಗುರು ತೇಜ್ ಬಹದ್ದೂರ್ ಅವರ 400ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮೊತ್ತ ಮೊದಲ ಬಾರಿಗೆ ಸೂರ್ಯಾಸ್ತದ ನಂತರ ಗುರುವಾರ ರಾತ್ರಿ ಐತಿಹಾಸಿಕ ಕೆಂಪುಕೋಟೆಯಿಂದ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಮೂಲಕ ಸೂರ್ಯಾಸ್ತ ನಂತರ ಭಾಷಣ ಮಾಡಿದ ಮೊದಲ ಪ್ರಧಾನಿ ಎಂದೆನಿಸಿಕೊಳ್ಳಲಿದ್ದಾರೆ.
1675ರಲ್ಲಿ 9ನೇ ಸಿಖ್ ಗುರು ತೇಗ್ ಬಹಾದೂರ್ ಅವರಿಗೆ ಮೊಘಲ್ ದೊರೆ ಔರಂಗಜೇಬ್ ಮರಣದಂಡನೆ ಘೋಷಿಸಿದ ಸ್ಥಳ ಇದಾಗಿದ್ದ ಕಾರಣದಿಂದ ಕೆಂಪುಕೋಟೆಯನ್ನು ವೇದಿಕೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪುಕೋಟೆಯ ಲಾನ್ಸ್ ನಿಂದ ಮೋದಿ ಭಾಷಣ ಮಾಡಲಿದ್ದಾರೆ. ಗುರುವಾರ ರಾತ್ರಿ 9-30 ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದು, ಸಮುದಾಯಗಳ ಮಧ್ಯೆ ಭ್ರಾತೃತ್ವ ಮತ್ತು ಶಾಂತಿ ಕಾಪಾಡುವ ಬಗ್ಗೆ ಭಾಷಣವಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ರಾತ್ರಿ 400 ಸಿಖ್ ಸಂಗೀತಗಾರಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಿ ಮೋದಿ ಅವರು ಅಂಚೆ ಸ್ಟಾಂಪ್ ಮತ್ತು ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.