ಬೆಂಗಳೂರು, ಏ 20 (DaijiworldNews/MS): ನನ್ನ 4 ಪ್ರಶ್ನೆಗೆ ಧೈರ್ಯವಿದ್ದರೆ ಉತ್ತರಿಸಿ ಮಿಸ್ಟರ್ ಸುಳ್ಳುರಾಮಯ್ಯ ಎಂದು ಸವಾಲೆಸೆದಿದ್ದ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಟ್ವಿಟರ್ ನಲ್ಲಿ ಸರಣಿ ಪೋಸ್ಟ್ ಮಾಡಿ ಎಚ್ಡಿಕೆಗೆ ಟಾಂಗ್ ನೀಡಿರುವ ಸಿದ್ದರಾಮಯ್ಯ,"ದೇಶದಲ್ಲಿ ಇಂದು ನಡೆಯುತ್ತಿರುವ ಜಾತ್ಯತೀತತೆ ಮತ್ತು ಕೋಮುವಾದದ ನಡುವಿನ ನಿರ್ಣಾಯಕ ಹೋರಾಟದಲ್ಲಿ ನಾವೆಲ್ಲಿ ನಿಂತಿದ್ದೇವೆ ಎನ್ನುವುದನ್ನು ಜನತೆಗೆ ತಿಳಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ.ನಿತ್ಯ ನನ್ನ ವಿರುದ್ದ ನಂಜುಕಾರುತ್ತಿರುವ ಹೆಚ್.ಡಿ. ಕುಮಾರಸ್ವಾಮಿಯವರೇ ನೀವೆಲ್ಲಿ ನಿಂತಿದ್ದೀರಿ? ಎಂದು ಮೊದಲು ಹೇಳಿ" ಎಂದು ತಿರುಗೇಟು ನೀಡಿದ್ದಾರೆ.
"ಕುಮಾರಸ್ವಾಮಿಯವರೇ, ನಿಮ್ಮದು ಜಾತ್ಯತೀತತೆಗೆ ಬದ್ಧವಾಗಿರುವ ಪಕ್ಷ ಎಂದು ಹೇಳುತ್ತಲೇ ಬಂದಿದ್ದೀರಿ.
ಹಾಗಿದ್ದರೆ, ಮುಂದಿನ ದಿನಗಳಲ್ಲಿ ನಿಮ್ಮ ಪಕ್ಷ ಬಿಜೆಪಿಯ ಜೊತೆ ಚುನಾವಣಾ ಪೂರ್ವ ಇಲ್ಲವೇ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಲು ಸಿದ್ಧ ಇದ್ದೀರಾ? ವಚನಭಂಗದ ನಿಮ್ಮ ಇತಿಹಾಸವನ್ನು ಕಂಡ ನಾಡಿನ ಜನತೆ ಸುಲಭದಲ್ಲಿ ನಿಮ್ಮನ್ನು ನಂಬಲಾರರು. ನಂಬಿಕೆ ಹುಟ್ಟಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಿಮ್ಮ ತಂದೆ ಹೆಚ್.ಡಿ ದೇವೇಗೌಡರ ಮೇಲೆ ಆಣೆ ಮಾಡಿ ಘೋಷಿಸಲು ಸಿದ್ಧ ಇದ್ದೀರಾ? ಬಿಜೆಪಿ ಜೊತೆ ಎಂದೆಂದೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನೀವು ಘೋಷಿಸಿಬಿಟ್ಟರೆ ನಿಮ್ಮ ಪಕ್ಷ ಬಿಜೆಪಿಯ 'ಬಿ-ಟೀಮ್' ಎಂಬ ಆರೋಪವನ್ನು ಕೂಡಾ ಸುಳ್ಳು ಎಂದು ಸಾಬೀತು ಮಾಡಿದಂತಾಗುತ್ತದೆ. ನಿಮ್ಮ ಪಕ್ಷದ ಹೆಸರು ಕೂಡಾ ಅರ್ಥಪೂರ್ಣವಾಗುತ್ತದೆ" ಎಂದು ಪ್ರತಿಸವಾಲೊಡ್ಡಿದ್ದಾರೆ.
"ಗೋಮುಖ ವ್ಯಾಘ್ರರೇ ಸುತ್ತ ಕುಣಿದಾಡುತ್ತಿರುವ ಈ ಸಂದರ್ಭದಲ್ಲಿ ಜನ ಪ್ರತಿಯೊಬ್ಬರನ್ನೂ ಸಂಶಯದಿಂದ ನೋಡುತ್ತಿದ್ದಾರೆ.ಈ ಸಂದರ್ಭದಲ್ಲಿ ನಮ್ಮ ಅಸಲಿ ಮುಖವನ್ನು ಜನರ ಮುಂದೆ ತೆರೆದಿಟ್ಟು ಅವರ ವಿಶ್ವಾಸವನ್ನು ಗಳಿಸಿ ನಮ್ಮ ಹೋರಾಟದಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕಾಗಿದೆ. ಉಳಿದುದೆಲ್ಲವನ್ನೂ ಪಕ್ಕಕ್ಕಿಟ್ಟು ನನ್ನ ವಿರುದ್ಧದ ವೈಯಕ್ತಿಕ ನಿಂದೆ, ವಿಕೃತ ಮನಸ್ಸಿನ ಹಳಹಳಿಕೆ ಮತ್ತು ಸುಳ್ಳುಗಳಿಂದ ಕೂಡಿದ ಅಭಿಯಾನವನ್ನೇ ನೀವು ಮುಂದುವರಿಸುವುದಾದರೆ ಹಾಗೆಯೇ ಮಾಡಿ.ಸಾರ್ವಜನಿಕ ಜೀವನದಲ್ಲಿರುವ ನಮ್ಮನ್ನು - ನಿಮ್ಮನ್ನು ಜನ ನೋಡಿದ್ದಾರೆ ಅವರು ತೀರ್ಮಾನಿಸುತ್ತಾರೆ" ಎಂದು ಹೇಳಿದ್ದಾರೆ.