ಬೆಳಗಾವಿ, ಏ 19 (DaijiworldNews/DB): ರಾಮ, ಹನುಮ ಹೇಳಿದಾಗ ಶಕ್ತಿ ಬರುವಂತೆ, ಕೆಲವರಿಗೆ ನನ್ನನ್ನು ನೋಡಿದರೆ ಶಕ್ತಿ ಬರುತ್ತದೆ. ಖುಷಿಯೂ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.
ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಕೆಪಿಸಿಸಿಯಿಂದ 11 ಲಕ್ಷ ರೂ. ಪರಿಹಾರ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ವಿರುದ್ದ ನಡೆದಿರುವ ಮಹಾನಾಯಕನ ತಂಡದ ಷಡ್ಯಂತ್ರವನ್ನು ಶೀಘ್ರ ಬಹಿರಂಗಗೊಳಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಅದಕ್ಕೆ ಸಮಯ, ಸಂದರ್ಭ ಯಾಕೆ ಬೇಕು? ರಮೇಶ್ ಜಾರಕಿಹೊಳಿ ಉಸ್ತುವಾರಿ ಸಚಿವರಾಗಿದ್ದಾಗಲೇ ಸಂತೋಷ್ ಕೆಲಸ ಮಾಡಿದ್ದು, ಆಗ ಆರಂಭವಾಗಿರುವ ಕೆಲಸಕ್ಕೆ ದಾಖಲೆ ಇದೆ. ಅದನ್ನೆಲ್ಲ ಜನರ ಮುಂದೆ ಮುಕ್ತವಾಗಿ ಇಡಲಿ ಎಂದು ಸವಾಲು ಹಾಕಿದರು.
ಸಂತೋಷ್ ಪಾಟೀಲ್ ವಿರುದ್ದ ಮಾತನಾಡುವ ಪ್ರಯತ್ನವೂ ನಡೆಯುತ್ತಿದೆ. ಮನುಷ್ಯತ್ವವೇ ಕೆಲವರಿಗೆ ಇಲ್ಲದಾಗಿದೆ. ಮಾಡಿರುವ ಕೆಲಸಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡುವುದನ್ನು ಬಿಟ್ಟು, ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಯಾತಕ್ಕೆ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಈಗಿರುವುದು ದಪ್ಪ ಚರ್ಮದ ಸರ್ಕಾರ ಎಂದು ವ್ಯಂಗ್ಯವಾಡಿದ ಅವರು, ಸಂತೋಷ್ ಪ್ರಕರಣದಲ್ಲಿ ಎಫ್ಐಆರ್ನಲ್ಲಿ ದಾಖಲಾಗಿರುವ ಆರೋಪಿಗಳನ್ನು ಈವರೆಗೆ ಬಂಧಿಸುವುದಾಗಲೀ, ವಿಚಾರಣೆಗೊಳಪಡಿಸುವುದಾಗಲೀ ಮಾಡಿಲ್ಲ. ಈಶ್ವರಪ್ಪ ಅವರ ತಪ್ಪು ಈ ಪ್ರಕರಣದಲ್ಲಿ ಇಲ್ಲ ಎಂಬುದಾಗಿ ಮುಖ್ಯಮಂತ್ರಿಯವರೇ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಮೇಲೆ ಪರಸ್ಥಿತಿ ಹೇಗಿರಬೇಡ ಎಂದವರು ಹೇಳಿದರು.