ಪಾಟ್ನಾ, ಏ 19 (DaijiworldNews/DB): ಪದವೀಧರ ಯುವತಿಯೋರ್ವಳು ’ಚಾಯ್ವಾಲಿ’ ಎಂಬ ಹೆಸರಿನ ಅಂಗಡಿ ತೆರೆದು ಚಹಾ ಮಾರಾಟ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸದ್ದು ಮಾಡಿದ್ದಾಳೆ. ಬಗೆಬಗೆಯ ಚಹಾದ ರುಚಿಗಳು ಈಕೆಯ ಅಂಗಡಿಯಲ್ಲಿ ಲಭ್ಯವಿದೆ.
ಪಾಟ್ನಾ ಮಹಿಳಾ ಕಾಲೇಜಿನ ಹೊರಗೆ 'ಚಾಯ್ವಾಲಿ' ಅಂಗಡಿ ತೆರೆದಿರುವ 24 ವರ್ಷದ ಪ್ರಿಯಾಂಕಾ ಗುಪ್ತಾ ವಾರಣಾಸಿಯ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವಾಕೆ. ಮೂಲತಃ ಬಿಹಾರದ ಪೂರ್ಣಿಯಾದವರಾದ ಪ್ರಿಯಾಂಕಾ ಎರಡು ವರ್ಷಗಳಿಂದ ಬ್ಯಾಂಕ್ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಆದರೆ ಯಾವುದೇ ಪರೀಕ್ಷೆಯಲ್ಲೂ ಯಶಸ್ವಿಯಾಗದ ಕಾರಣ ಬದುಕು ಕಟ್ಟಿಕೊಳ್ಳುವ ದೃಷ್ಟಿಯಿಂದ ಚಹಾದಂಗಡಿ ತೆರೆದು, ಮತ್ತೆ ಪರೀಕ್ಷೆಗೆ ತಯಾರಾಗುತ್ತಿದ್ದಾರೆ.
ಚಹಾದಂಗಡಿ ತೆರೆದು ಹತ್ತು ದಿನವಾಗಿದ್ದು, ಕಾಲೇಜು ವಿದ್ಯಾರ್ಥಿಗಳೇ ಗ್ರಾಹಕರು. ಕುಲ್ಹಾದ್ ಚಾಯ್, ಮಸಾಲಾ ಚಾಯ್, ಪಾನ್ ಚಾಯ್ ಮತ್ತು ಚಾಕೊಲೇಟ್ ಚಾಯ್ ಇಲ್ಲಿ ಲಭ್ಯವಿದ್ದು, ಬೆಲೆ ಕೇವಲ 15 ರಿಂದ 20 ರೂ.ಗಳಾಗಿವೆ. ಗ್ರಾಹಕರನ್ನು ಸೆಳೆಯಲು ಅಂಗಡಿಗೆ 'ಪೀನಾ ಹಿ ಪಡೆಗಾ' ಹಾಗೂ 'ಸೋಚ್ ಮತ್... ಚಾಲು ಕರ್ ದೇ ಬಾಸ್' ಎಂಬ ಪಂಚ್ ಲೈನ್ ಹಾಕಿದ್ದಾರೆ. ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರ ಚಹಾದಂಗಡಿ ಚಿತ್ರಗಳು ವೈರಲ್ ಆಗಿದ್ದು, ಹೆಚ್ಚೆಚ್ಚು ಜನ ಬರಲಾರಂಭಿಸಿದ್ದಾರೆ. ಇದರಿಂದ ಆಕೆ ತನ್ನ ಅಂಗಡಿಯನ್ನು ಹೊಸ ಸ್ಥಳಕ್ಕೆ ವಿಸ್ತರಿಸಲೂ ಯೋಜಿಸಿದ್ದಾರೆ ಎಂಬುದಾಗಿ ಸುದ್ದಿ ಸಂಸ್ಥೆಯೊಂದು ತನ್ನ ವರದಿಯಲ್ಲಿ ತಿಳಿಸಿದೆ.
ಸ್ವಾವಲಂಬಿಯಾಗಿ ಜೀವನ ಸಾಗಿಸಬೇಕೆಂಬ ಮಹದಾಸೆಯಿಂದ ಚಹಾದಂಗಡಿ ತೆರೆದಿದ್ದೇನೆ. ಚಹಾ ಉದ್ಯಮ ನಡೆಸುವುದು ಕೀಳು ಉದ್ಯಮವಲ್ಲ. ಚಾಯ್ವಾಲಾಗಳು ಇರುವಾಗ ಚಾಯ್ವಾಲಿಗಳು ಯಾಕಿರಬಾರದು? ಚಹಾದಂಗಡಿ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರಫುಲ್ ಬಿಲ್ಲರ್ ಅವರೇ ನನಗೆ ಸ್ಪೂರ್ತಿ ಎಂದು ಸುದ್ದಿ ಸಂಸ್ಥೆಯೊಂದು ಮಾತನಾಡಿಸಿದಾಗ ಪ್ರಿಯಾಂಕಾ ಹೇಳಿಕೊಂಡಿದ್ದಾರೆ.