ನವದೆಹಲಿ, ಏ 19 (DaijiworldNews/DB): ರಾಷ್ಟ್ರೀಯ ಭದ್ರತಾ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಅವರ ಎಂಟು ವರ್ಷಗಳ ಆಡಳಿತದಲ್ಲಿ ರಾಷ್ಟ್ರದ ಭದ್ರತೆ ದುರ್ಬಲಗೊಂಡಿದೆ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಚೀನಾದ ನಡೆಯನ್ನು ಮೋದಿಯವರು ಅರ್ಥೈಸಿಕೊಂಡಿಲ್ಲ. ರಾಷ್ಟ್ರೀಯ ಭದ್ರತೆಗೆ ಸವಾಲಾಗಿರುವ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ, ಆರ್ಥಿಕ ಬೆಳವಣಿಗೆಯಲ್ಲಿಯೂ ದೇಶ ಹಿಂದುಳಿದಿದೆ ಎಂದು ಆಪಾದನೆ ಮಾಡಿದ್ದಾರೆ.
ರಾಷ್ಟ್ರೀಯ ಭದ್ರತೆಯನ್ನು ಗಟ್ಟಿಗೊಳಿಸುವುದು ಮತ್ತು ಆರ್ಥಿಕತೆ ಹಳಿ ತಪ್ಪದಂತೆ ನೋಡಿಕೊಳ್ಳಲು ಇನ್ನೂ ಅವಕಾಶವಿದೆ. ಆದರೆ ಅದನ್ನು ಮಾಡುವ ಬಗೆ ಹೇಗೆ ಎಂದು ಪ್ರಧಾನಿಯವರಿಗೆ ಗೊತ್ತಿದೆಯೇ ಎಂದವರು ಇದೇ ವೇಳೆ ಪ್ರಶ್ನಿಸಿದ್ದಾರೆ.
ಸ್ವಾಮಿಯವರ ಈ ಟ್ವೀಟ್ನ್ನು ಆಂಗ್ರಿ ಮರಾಠಿ ಟ್ವೀಟರ್ ಹ್ಯಾಂಡಲ್ ರೀಟ್ವೀಟ್ ಮಾಡಿದ್ದು, ನೀವು ಈ ವಿಚಾರಗಳನ್ನು ಪ್ರಧಾನಿಯವರಿಗೆ ತಲುಪಿಸಿ ಎಂದಿದೆ. ಇದಕ್ಕೆ ಉತ್ತರಿಸಿದ ಸ್ವಾಮಿ, ಈ ಪ್ರಯತ್ನವನ್ನು ಕಳೆದೆರಡು ವರ್ಷದ ಹಿಂದೆ ನಾನು ಮಾಡಿದ್ದೆ. ಆದರೆ ಅವರಿಗೆ ಆರ್ಥಶಾಸ್ತ್ರ ತಿಳಿದಿಲ್ಲ ಎಂದೂ ಹೇಳಿದ್ದಾರೆ.