ವಿಜಯವಾಡ, ಏ 19 (DaijiworldNews/HR): ಮದುವೆಯಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ನಿಶ್ಚಯವಾದ ಭಾವಿ ಪತಿಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿರುವ ಘಟನೆ ಆಂಧ್ರ ಪ್ರದೇಶದ ಅನಕಪಲ್ಲೆ ಜಿಲ್ಲೆಯ ರವಿಕಾಮತಮ್ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂತ್ರಸ್ತ ರಾಮು ನಾಯ್ಡು ಹೈದರಾಬಾದ್ನ ಸಿಎಸ್ಐಆರ್ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮದುವೆ ಆರೋಪಿ ಯುವತಿ ಜತೆ ಮೇ 26ರಂದು ನಡೆಯಬೇಕಿತ್ತು. ಎರಡೂ ಮನೆಯವರು ಮದುವೆಗೆ ಬೇಕಾದ ತಯಾರಿಯನ್ನು ನಡೆಸುತ್ತಿದ್ದರು.
ಇನ್ನು ಇತ್ತೀಚೆಗೆ ರಾಮ ನಾಯ್ಡುಗೆ ಕರೆ ಮಾಡಿದ ಯುವತಿ, ಒಂದು ಸರ್ಪ್ರೈಸ್ ಗಿಫ್ಟ್ ಇದೆ ಎಂದು ಹೇಳಿ ತಮ್ಮೂರಿಗೆ ಬರುವಂತೆ ಕೇಳಿದ್ದಳು. ಅದರಂತೆ ರಾಮ ನಾಯ್ಡು ಭಾವಿ ಪತ್ನಿಯ ಊರಿಗೆ ಭೇಟಿ ನೀಡಿ ಇಬ್ಬರು ಬೆಟ್ಟದ ಮೇಲಿರುವ ಒಂದು ಸಣ್ಣ ದೇವಸ್ಥಾನ ಬಳಿ ಹೋಗಿದ್ದು, ಈ ವೇಳೆ ಯುವತಿ ಸರ್ಪ್ರೈಸ್ ಗಿಫ್ಟ್ ಕೊಡುತ್ತೇನೆ ಕಣ್ಣು ಮುಚ್ಚು ಎಂದು ರಾಮ ನಾಯ್ಡುಗೆ ಹೇಳಿದ್ದಾರೆ. ಆತ ಕಣ್ಣು ಮುಚ್ಚಿದ ಬೆನ್ನಲ್ಲೇ ಆತನ ಗಂಟಲನ್ನು ಯುವತಿ ಸೀಳಿದ್ದಾಳೆ.
ಬೆಟ್ಟದ ಪ್ರದೇಶವಾಗಿದ್ದರಿಂದ ರಾಮ ನಾಯ್ಡುಗೆ ಯಾರೊಬ್ಬರು ರಕ್ಷಣೆಗೆ ಬರಲಿಲ್ಲ. ಕೊನೆಗೆ ತನ್ನ ಫೋನ್ ತೆಗೆದು 108ಕ್ಕೆ ಕರೆ ಮಾಡಿದ್ದು, ತಕ್ಷಣ ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದಿದೆ. ಇದರಿಂದ ರಾಮ ನಾಯ್ಡು ಬದುಕುಳಿದಿದ್ದಾನೆ.