ನವದೆಹಲಿ, ಏ 19 (DaijiworldNews/DB): ಚುನಾವಣೆ ಹಿನ್ನೆಲೆಯಲ್ಲಿ ಸಿದ್ದಗೊಳಿಸಬೇಕಾದ ರಣತಂತ್ರಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷವು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸಹಭಾಗಿತ್ವದಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದೆ. ಈಗಾಗಲೇ ಮೂರು ಸಭೆಗಳು ನಡೆದಿವೆ.
ಮುಂಬರುವ ಮಧ್ಯಪ್ರವೇಶ, ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ವರ್ಷಕ್ಕೂ ಮುನ್ನವೇ ಪೂರ್ವ ತಯಾರಿಯಲ್ಲಿ ತೊಡಗಿವೆ. ಕಾಂಗ್ರೆಸ್ ಪಕ್ಷವು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನೂ ಒಳಗೊಂಡು ಸಭೆ ನಡೆಸುತ್ತಿದ್ದು, ಚುನಾವಣೆಗಾಗಿ ತಂತ್ರ ಹೆಣೆಯುತ್ತಿದೆ. ಇನ್ನೂ ಎರಡು ಸಭೆಗಳು ಇವರ ಮುಂದಾಳತ್ವದಲ್ಲೇ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಪಕ್ಷ ಸಂಘಟಿಸಲು ಮತ್ತು ಕಳೆದುಕೊಂಡ ಕಡೆಗಳಲ್ಲಿ ಮತ್ತೆ ಅಧಿಕಾರ ಹಿಡಿಯುವ ಕುರಿತು ಗಂಭೀರ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಮಂಗಳವಾರ ಸೋನಿಯಾ ಗಾಂಧಿಯವರ ನಿವಾಸದಲ್ಲಿ ಸಭೆ ನಡೆಯಿತು. ಹಿರಿಯ ನಾಯಕರಾದ ಕಮಲ್ನಾಥ್, ದಿಗ್ವಿಜಯ್ ಸಿಂಗ್, ಮುಕುಲ್ ವಾಸ್ನಿಕ್, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಎ.ಕೆ. ಆಂತೊನಿ, ಅಂಬಿಕಾ ಸೋನಿ, ರಣದೀಪ್ ಸಿಂಗ್ ಸುರ್ಜೆವಾಲ ಮೊದಲದಾವರು ಭಾಗವಹಿಸಿದ್ದರು.