ದಾವಣಗೆರೆ, ಏ 19 (DaijiworldNews/DB): ಲೂಟಿ ಮಾಡಿದವರು, ಠಾಣೆಗೆ ನುಗ್ಗಿದವರು ಅಮಾಯಕರೇ ಎಂಬುದನ್ನು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಹಳೆ ಹುಬ್ಬಳ್ಳಿಯಲ್ಲಿ ನಡೆದ ಅಹಿತಕರ ಘಟನೆ ಸಂಬಂಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಮಾಯಕರನ್ನು ಬಂಧಿಸಬಾರದು ಎಂದಿದ್ದಾರೆ. ಆದರೆ ಲೂಟಿಕೋರರು, ಠಾಣೆಗೆ ನುಗ್ಗಿದವರು ಅವರ ದೃಷ್ಟಿಯಲ್ಲಿ ಅಮಾಯಕರೇ ಎಂದು ಪ್ರಶ್ನಿಸಿದರು.
ಮಸೀದಿ ಮೇಲೆ ಕೇಸರಿ ಧ್ವಜದ ಪೋಸ್ಟ್ ಹಾಕಿದ ಆರೋಪಿಯನ್ನು ಪೋಸ್ಟ್ ಪ್ರಕಟಗೊಂಡ ಒಂದು ಗಂಟೆಯೊಳಗೆ ಬಂಧಿಸಲಾಗಿದೆ. ಆದಾಗ್ಯೂ ಒಂದು ಕೋಮಿನವರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಆಸ್ಪತ್ರೆ, ದೇವಸ್ಥಾನ, ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದಲ್ಲದೆ, ಪೊಲೀಸರಿಗೆ, ವಾಹನಗಳಿಗೆ ಗಾಯ, ಹಾನಿ ಮಾಡಿದ್ದಾರೆ. ಘಟನೆಗೆ ಮುಖ್ಯ ಕಾರಣ ಅಲ್ತಾಫ್ ಹಳ್ಳೂರು ಎಂಬುದು ಗೊತ್ತಿದ್ದರೂ, ಸಿದ್ದರಾಮಯ್ಯ ಇನ್ನೂ ಕೂಡಾ ಅಮಾಯಕರನ್ನು ಬಂಧಿಸಬೇಡಿ ಎನ್ನುತ್ತಿದ್ದಾರೆ. ಅವರು ಬೆಂಗಳೂರಿನಲ್ಲಿ ಕುಳಿತು ಹೇಳುವ ಬದಲು ಹುಬ್ಬಳ್ಳಿಗೆ ತೆರಳಿ ವಾಸ್ತವಾಂಶ ಅರಿತುಕೊಳ್ಳಲಿ ಎಂದರು.
ಘಟನೆ ನಡೆದ ಮಾಹಿತಿ ಬಂದ ತತ್ಕ್ಷಣ ಕ್ರಮ ವಹಿಸಲಾಗಿದೆ. ಗೃಹಸಚಿವರು ಉತ್ತಮ ಕಾರ್ಯದಕ್ಷತೆ ತೋರುತ್ತಿದ್ದಾರೆ. ಅವರನ್ನು ಬದಲಾಯಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರೋಪ ಮಾಡಿದವರು ದಾಖಲೆ ನೀಡಲಿ. ದಾಖಲೆ ಲಭಿಸಿದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬಿ.ವೈ. ವಿಜಯೇಂದ್ರ ಮಂತ್ರಿ ಆಗುತ್ತಾರೆಯೇ ಎಂದು ಕೇಳಿದಾಗ, ಗೊತ್ತಿಲ್ಲ ಎಂದಷ್ಟೇ ಉತ್ತರಿಸಿದರು. ಸಚಿವ ಸಂಪುಟ ಪುನಾರಚನೆ, ವಿಸ್ತರಣೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಇದೇ ವೇಳೆ ತಿಳಿಸಿದರು.