ಬೆಂಗಳೂರು, ಏ 19 (DaijiworldNews/MS): ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ- 2020ರ ಸೆಕ್ಷನ್ 5 ಮತ್ತು ಅದರ ಅಡಿ ರೂಪಿಸಿರುವ ನಿಯಮಗಳ ಜಾರಿಗೆ ಸೋಮವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿಸಿದೆ. ಆದರೆ, ಈ ಅನುಮತಿಯು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದೂ ಹೈಕೋರ್ಟ್ ಹೇಳಿದೆ. ಈ ಮೂಲಕ ಕಾಯ್ದೆ ಜಾರಿಗೆ ಎದುರಾಗಿದ್ದ ತಾಂತ್ರಿಕ ಅಡಚಣೆ ದೂರವಾದಂತಾಗಿದೆ.
ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಮೊಹಮ್ಮದ್ ಆರೀಫ್ ಜಮೀಲ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ನ್ಯಾಯಾಲಯದ ಆದೇಶದಂತೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಸಂರಕ್ಷಣಾ ಕಾಯ್ದೆ ಸೆಕ್ಷನ್ 5ರ ಜಾರಿಗೆ ನಿಯಮಗಳನ್ನು ರೂಪಿಸಲಾಗಿದೆ. ಆದ್ದರಿಂದ ಕಾಯ್ದೆಯ ಸೆಕ್ಷನ್ 5ರ ಜಾರಿಗೆ ಅನುಮತಿ ನೀಡಬೇಕು. ಅದಕ್ಕಾಗಿ ನಿಯಮ ರೂಪಿಸಿ ಅವುಗಳನ್ನು ಜಾರಿಗೆ ತರುವವರೆಗೆ ಯಾವುದೇ ವ್ಯಕ್ತಿಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು 2021ರ ಜನವರಿ 20ರಂದು ನೀಡಿದ್ದ ಆದೇಶವನ್ನು ಮಾರ್ಪಡಿಸಬೇಕು ಎಂದು ಕೋರಿದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿದ್ದು, ಕಾಯಿದೆ ಮತ್ತು ನಿಯಮಗಳು ಜಾರಿ ಮಾಡುವುದರಿಂದ ನಿರ್ದಿಷ್ಟ ಸಮುದಾಯದ ಕುರಿತು ಪೂರ್ವಾಗ್ರಹ ಉಂಟು ಮಾಡಲಿದೆ. ಹೀಗಾಗಿ, ಅದಕ್ಕೆ ಅನುಮತಿಸಬಾರದು” ಎಂದು ಆಕ್ಷೇಪಿಸಿದರು.
ರಾಜ್ಯ ಸರ್ಕಾರದ ಮನವಿ ಮತ್ತು ಅರ್ಜಿದಾರ ಆಕ್ಷೇಪಣೆ ದಾಖಲಿಸಿಕೊಂಡ ನ್ಯಾಯಪೀಠ, ಕರ್ನಾಟಕ ಜಾರುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ-2020 ಅನ್ನು ಸರ್ಕಾರವು 2021ರ ಫೆ.15ರಂದು ಜಾರಿ ಮಾಡಿದೆ. 2021ರ ಮೇ 24ರಂದು ಅಧಿಸೂಚನೆ ಹೊರಡಿಸಲಾಗಿದೆ. 2021ರ ಮೇ 25ರಂದು ಗೆಜೆಟ್ನಲ್ಲಿ ಪ್ರಕಟಿಸಲಾಗಿದೆ. ಇದೀಗ ಕಾಯ್ದೆ ಸೆಕ್ಷನ್ 5 ಮತ್ತದರ ಅಡಿ ನಿಯಮ ರೂಪಿಸಲಾಗಿದ್ದು, ಜಾರಿಗೊಳಿಸಲು ನ್ಯಾಯಾಲಯದ ಅನುಮತಿ ಕೋರಿದೆ. ಆದ್ದರಿಂದ 2021ರ ಜ.20ರಂದು ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಮಾರ್ಪಾಡು ಮಾಡಲಾಗುತ್ತಿದ್ದು, ಸೆಕ್ಷನ್ 5ರ ಜಾರಿಗೆ ಅನುಮತಿ ನೀಡಲಾಗುತ್ತಿದೆ. ಆದರೆ, ಇದು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.