ದಾವಣಗೆರೆ, ಏ 19 (DaijiworldNews/DB): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನ ಗಳಿಸುವುದು ನಿಶ್ಚಿತ. ಬಿಜೆಪಿಗೆ ಮತ್ತೊಮ್ಮೆ ರಾಜ್ಯದ ಜನ ಅಧಿಕಾರ ಕೊಡುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬ ನಿಟ್ಟಿನಲ್ಲಿ ಈಗಾಗಲೇ 4-5 ತಂಡಗಳು ರಾಜ್ಯ ಪ್ರವಾಸ ನಡೆಸಲು ಯೋಜಿಸಲಾಗಿದೆ. ಇದಕ್ಕಾಗಿ ರೂಪುರೇಷೆಗಳೂ ಸಿದ್ದಗೊಂಡಿದ್ದೇವೆ. 150 ಸ್ಥಾನ ಪಡೆಯುವ ಗುರಿಯೊಂದಿಗೆ ಬಿಜೆಪಿಯ ಪ್ರತಿ ಮುಖಂಡರು ಶ್ರಮಿಸಲಿದ್ದಾರೆ ಎಂದರು.
ಚುನಾವಣೆಗೆ ವರ್ಷವಿರುವಾಗಲೇ ನಿರಂತರ ಶ್ರಮದಲ್ಲಿ ತೊಡಗಿರುವುದು ಇದೇ ಮೊದಲು. ಪ್ರವಾಸ, ಸಾರ್ವಜನಿಕರ ಭೇಟಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಭಿವೃದ್ದಿ ಸಾಧನೆಗಳನ್ನು ರಾಜ್ಯದ ಜನತೆಯ ಮುಂದಿಡಲಾಗುವುದು. ದಾವಣಗೆರೆಯಲ್ಲಿನ ವಿಭಾಗೀಯ ಸಭೆ ಅಂತಿಮಗೊಂಡ ತತ್ಕ್ಷಣ ಪ್ರವಾಸ ಆರಂಭವಾಗಲಿದೆ ಎಂದವರು ತಿಳಿಸಿದರು.
ಜನ ಈಗಾಗಲೇ ದೇಶಾದ್ಯಂತ ಕಾಂಗ್ರೆಸ್ನ್ನು ತಿರಸ್ಕರಿಸಲು ಆರಂಭಿಸಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ. ಆ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಮುಂದೆ ಅದರ ಅಸ್ತಿತ್ವವೂ ಇಲ್ಲವಾಗಲಿದೆ ಎಂದು ಇದೇ ವೇಳೆ ಬಿಎಸ್ವೈ ತಿಳಿಸಿದರು.