ಬೆಂಗಳೂರು, ಏ 19 (DaijiworldNews/MS): ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಕಾಂಗ್ರೆಸ್ ನಾಯಕರೇ ನೇರ ಕಾರಣ ಎಂದು ಬಿಜೆಪಿ ಪಕ್ಷ ಆರೋಪಿಸಿದೆ.
ಪ್ರಚೋದನಕಾರಿ ವಾಟ್ಸಪ್ ಸ್ಟೇಟಸ್ ವಿಡಿಯೋದಿಂದಾಗಿ ಹುಬ್ಬಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ವಿಚಾರದ ಕುರಿತಾಗಿ ಸರಣಿ ಟ್ವಿಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, "ಗಲಭೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರೇ ಕಾರಣ. ಮೌಲ್ವಿಯ ಪ್ರಚೋದನಾ ಭಾಷಣದ ವೇಳೆ ಅಲ್ತಾಫ್ ಅವರು ಶಾಂತಿ ಕದಡಲು ಗಲಭೆಗೆ ಪ್ರಚೋದನೆ ನೀಡಿದ್ದಾರೆ" ಎಂದು ಗಂಭೀರ ಆರೋಪ ಮಾಡಿದೆ.
"ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಲೀಮ್ ಅಹಮದ್ ಅವರಿಗೆ ಟಿಕೆಟ್ ನೀಡಿದಾಗ ಹುಬ್ಬಳ್ಳಿ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಅವರಿಗೆ ಅಸಮಾಧಾನವಾಗಿತ್ತು.ಹುಬ್ಬಳ್ಳಿ ಗಲಭೆ ಈ ಅಸಮಾಧಾನದ ಮುಂದುವರೆದ ಭಾಗವೇ!?ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ಪ್ರಾಯೋಜಕತ್ವದಲ್ಲೇ ನಡೆದಿದ್ದೇ? ಮೀರ್ ಸಾದಿಕ್ ಸಿಎಂ ಆಗಿದ್ದ ಸಂದರ್ಭದಲ್ಲಿ ಸೆರೆಮನೆಯಲ್ಲಿದ್ದವರಿಗೆ ತರಬೇತಿ ಕೊಟ್ಟು ಬಿಡುಗಡೆಗೊಳಿಸಿದ್ದಾರೆ. ಇದೀಗ ಈ ಗಲಭೆಗೆ ಅವರೇ ನೇರ ಕಾರಣ ಪೊಲೀಸ್ ಬಂಧನದಲ್ಲಿದ್ದವರನ್ನು ನನ್ನ ಕೈಗೊಪ್ಪಿಸಿ ಎಂದು ಅಬ್ಬರಿಸುವ ಇವರಿಗೆ ಕಾನೂನು ಕೈಗೆತ್ತಿಕೊಳ್ಳುವುದು ಹುಟ್ಟು ಚಾಳಿಯೇ" ಎಂದು ಪ್ರಶ್ನಿಸಿದೆ.
"ಒಂದು ಕಡೆ, ಪೊಲೀಸ್ ಅಧಿಕಾರಿಗಳಿಗೆ ಶಾಂತಿ ಸ್ಥಾಪಿಸಲು ಮನವಿ ಮಾಡುವುದು.ಇನ್ನೊಂದು ಕಡೆ, ಲೋಡುಗಟ್ಟಲೆ ಕಲ್ಲು ಸಂಗ್ರಹಿಸಿ ಕಲ್ಲು ತೂರಾಟ ಮಾಡಿದವರನ್ನು ಅಮಾಯಕರು ಎನ್ನುವುದು, ಇದು ಕಾಂಗ್ರೆಸ್ ನಾಯಕರ ವರಸೆ.ಆರಕ್ಷಕರ ಮೇಲೆಯೇ ದಾಳಿ ಮಾಡಿದ ಅಲ್ಪಮತೀಯರನ್ನು ಅಮಾಯಕರು ಎಂದು ಹೇಳಲು ನೀವು ಯಾರು?" ಎಂದು ಲೇವಡಿ ಮಾಡಿದೆ.