ಶ್ರೀನಗರ, ಏ 19 (DaijiworldNews/DB): ಭಾರತದ ನಾಗರಿಕರಿಗೆ ನೀಡುವ ಆಧಾರ್ ಕಾರ್ಡ್ ಗುರುತಿನ ಚೀಟಿಯನ್ನು ಪಾಕಿಸ್ತಾನದ ಉಗ್ರರು ದುರುಪಯೋಗ ಮಾಡಿಕೊಳ್ಳುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ತಮ್ಮ ಮೂಲವನ್ನು ಮರೆಮಾಚಲು ಇಂತಹ ಕೃತ್ಯವನ್ನು ಪಾಕ್ ಉಗ್ರರು ಎಸಗುತ್ತಿದ್ದಾರೆ. ಆಧಾರ್ನ ಬಯೋಮೆಟ್ರಿಕ್ ಮಾಹಿತಿ ಕದ್ದು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ (ಯುಐಡಿಎಐ) ಮತ್ತಷ್ಟು ಸುರಕ್ಷತಾ ಕ್ರಮ ಅಳವಡಿಸಿ, ರಕ್ಷಣೆ ಬಿಗಿಗೊಳಿಸುವಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮನವಿ ಮಾಡಿದ್ದಾರೆ.
ಶ್ರೀನಗರದ ದಲ್ಲೇಖ್ ಸಮೀಪದ ಬಿಷೆಂಭರ್ ನಗರದಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾಪಡೆಗಳು ಇತ್ತೀಚೆಗೆ ಹತ್ಯೆ ಮಾಡಿದ್ದರು. ಈ ವೇಳೆ ಹತ್ಯೆಯಾಗಿದ್ದ ಸ್ಥಳದಲ್ಲಿ ಎರಡು ಆಧಾರ್ ಕಾರ್ಡ್ಗಳು ಪತ್ತೆಯಾಗಿದ್ದು, ಅದರಲ್ಲಿ ವಿಳಾಸವನ್ನು ಜಮ್ಮು ಎಂದು ಉಲ್ಲೇಖಿಸಿರುವುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಯುಐಡಿಎಐಗೆ ಪತ್ರ ಬರೆದು ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.