ಬೆಂಗಳೂರು, ಏ 19 (DaijiworldNews/DB): ಬಿಬಿಎಂಪಿಯ ಕಸದ ಲಾರಿ ಸ್ಕೂಟರ್ಗೆ ಡಿಕ್ಕಿ ಹೊಡೆದು ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಹುಟ್ಟುವ ಮೊದಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲಿ ಬೆಳೆಯುತ್ತಿದ್ದ ಅವರ ಪುಟ್ಟ ಮಗು ಇದೀಗ ಅಮ್ಮನನ್ನೂ ಕಳೆದುಕೊಂಡು ಅನಾಥವಾಗಿದೆ.
ಎಸ್ಬಿಐ ಬ್ಯಾಂಕ್ ಚಂದ್ರಾಲೇಔಟ್ ಬ್ರಾಂಚ್ನಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿರುವ ಪದ್ಮಿನಿ (40) ಮೃತಪಟ್ಟವರು. ಸೋಮವಾರ ಸಂಜೆ ಕೆಲಸ ಬಿಟ್ಟು ತಮ್ಮ ಮನೆಗೆ ಸ್ಕೂಟರ್ನಲ್ಲಿ ಮರಳುತ್ತಿದ್ದಾಗ ಮಾರ್ಗಮಧ್ಯೆ ನಾಯಂಡಹಳ್ಳಿ ಬಳಿ ಬಿಬಿಎಂಪಿ ಕಸದ ಲಾರಿ ಅವರ ಸ್ಕೂಟರ್ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಪದ್ಮಿನಿ ಸಾವನ್ನಪ್ಪಿದ್ದಾರೆ.
ಹೈದ್ರಾಬಾದ್ ಮೂಲದ ಪದ್ಮಿನಿ ಕಳೆದ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ, ಅವರು ಐದು ತಿಂಗಳ ಗರ್ಭಿಣಿಯಾಗಿದ್ದಾಗ ಪತಿ ಮೃತಪಟ್ಟಿದ್ದರು. ಇದರಿಂದ ಹುಟ್ಟುವ ಮೊದಲೇ ಅಪ್ಪನನ್ನು ಕಳೆದುಕೊಂಡಿದ್ದ ಅವರು ಪುಟ್ಟ ಮಗಳು ಅಮ್ಮನ ಆರೈಕೆಯಲ್ಲಿ ಬೆಳೆಯುತ್ತಿದ್ದಳು. ಇದೀಗ ಅಮ್ಮನ ಬದುಕಿನಲ್ಲಿಯೂ ವಿಧಿ ಚೆಲ್ಲಾಟವಾಡಿದ್ದರಿಂದ ಪುಟ್ಟ ಮಗು ಅನಾಥವಾಗಿದೆ.
ಪೋಷಕರ ಜೊತೆ ರಾಜರಾಜೇಶ್ವರಿ ನಗರದಲ್ಲಿ ಮಗುವಿನೊಂದಿಗೆ ಪದ್ಮಿನಿ ವಾಸವಿದ್ದರು.