ಬೆಂಗಳೂರು, ಏ 19 (DaijiworldNews/HR): ಬೆಂಗಳೂರಿನ ಯಲಹಂಕ ಬಳಿಯ ಜಕ್ಕೂರು ಏರೋಡ್ರೋಮ್ ನಲ್ಲಿ ಸೆಸ್ನಾ 185 ಎಂಬ ಹೆಸರಿನ ತರಬೇತಿ ವಿಮಾನವೊಂದು ಉರುಳಿ ಬಿದ್ದಿರುವ ಘಟನೆ ನಡೆದಿದೆ.
ಈ ವೇಳೆ ಇಬ್ಬರು ಪೈಲಟ್ಗಳು ಏರ್ ಕ್ರಾಫ್ಟ್ನಲ್ಲಿ ಇದ್ದರು ಎನ್ನಲಾಗಿದ್ದು, ಅದೃಷ್ಟವಶಾತ್ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಸೆಸ್ನಾ 185, ಟೈಲ್ವೀಲ್ ವಿಮಾನವು ಖಾಸಗಿ ಫ್ಲೈಯಿಂಗ್ ಇನ್ಸ್ಟಿಟ್ಯೂಟ್ಗೆ ಸೇರಿದ್ದಾಗಿದ್ದು, ಇದನ್ನು ಸ್ಕೈಡೈವಿಂಗ್ಗೆ ಬಳಸಲಾಗುತ್ತದೆ. ಅಂತರಾಷ್ಟ್ರೀಯ ಸ್ಕೈಡೈವಿಂಗ್ ಚಾಂಪಿಯನ್ ಚೆರಿಲ್ ಆನ್ ಸ್ಟೆರ್ನ್ಸ್ ಅವರು ವಿಮಾನದಲ್ಲಿದ್ದರು ಮತ್ತು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಲ್ಯಾಂಡಿಂಗ್ ವೇಳೆ ರನ್ವೇಯಲ್ಲಿ ಪಕ್ಷಿಗಳು ಮತ್ತು ನಾಯಿಗಳ ಹಿಂಡು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ವಿಮಾನ ಚಾಲನೆ ವೇಳೆ ನಾಯಿಯೊಂದು ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆದ ವಿಮಾನ ರನ್ ವೇನಲ್ಲಿ ಉರುಳಿ ಪಕ್ಕಕ್ಕೆ ಬಿದ್ದಿದೆ ಎಂದು ವರದಿಯಾಗಿದೆ.