ಬೆಂಗಳೂರು,ಏ 18 (DaijiworldNews/MS): 'ದೇವರಿಂದಲೂ ಕಮಿಷನ್ ಕೇಳುವ ನಿಮ್ಮದು ಯಾವ ರೀತಿಯ ಧರ್ಮ ರಕ್ಷಣೆ' ಎಂದು ಬಿಜೆಪಿ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕರ್ನಾಟಕ ಸರ್ಕಾರ ಕೇವಲ ಗುತ್ತಿಗೆದಾರರಿಂದ ಮಾತ್ರವಲ್ಲ, ಮಠಾಧೀಶರಿಂದಲೂ ಪರ್ಸೆಂಟೇಜ್ ಕೇಳುತ್ತಿದ್ದು, ಮಠಗಳು ಶೇ. 30 ಪರ್ಸೆಂಟೇಜ್ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿದೆ" ಎಂಬ ಬೀಳಗಿ ಬಾಳಗಂಡಿಯ ದಿಂಗಾಲೇಶ್ವರ ಸ್ವಾಮೀಜಿ ಆರೋಪ ಮಾಡಿರುವ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಧರ್ಮ ರಕ್ಷಕರು ಎಂದು ತಮ್ಮನ್ನು ಕರೆದುಕೊಳ್ಳುವ ಬಿಜೆಪಿಯವರು ಮಠ, ಮಂದಿರಗಳ ಅನುದಾನವನ್ನೂ ಬಿಡದೆ 30% ಕಮಿಷನ್ ತಿಂದು ತೇಗುತ್ತಿರುವುದು ನಾಚಿಕೆಗೇಡು.10% ಡಿಸ್ಕೌಂಟ್ ಯಾಕೆ? ಅದನ್ನು ತಿಂದು ಬಿಡಿ. ದೇವರಿಂದಲೂ ಕಮಿಷನ್ ಕೇಳುವ ನಿಮ್ಮದು ಯಾವ ರೀತಿಯ ಧರ್ಮ ರಕ್ಷಣೆ ಎಂದು ಅಣಕವಾಡಿದ್ದಾರೆ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ , ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ ಎಂದು ಖಾಲಿ ಬುಟ್ಟಿಯ ಮುಂದೆ ನಿಂತು ಪುಂಗಿ ಊದಬೇಡಿ, ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿ. ಬುಟ್ಟಿಯ ಒಳಗಿರುವುದು ನಾಗರ ಹಾವೋ, ಹಾವಿನಪುರದ ಹಾವೋ ನೋಡಿಯೇ ಬಿಡೋಣ ಎಂದು ಇದೇ ವೇಳೆ ಸವಾಲ್ ಹಾಕಿದ್ದಾರೆ.