ಬೆಂಗಳೂರು, ಏ 18 (DaijiworldNews/HR): ಜೆಡಿಎಸ್ ಪಕ್ಷವು ಭ್ರಷ್ಟಾಚಾರ ಹಗರಣದಲ್ಲಿ ಬಿಜೆಪಿಯನ್ನು ಏಕೆ ಸಮರ್ಥಿಸಿಕೊಳ್ಳುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೊಮ್ಮಾಯಿ ಸರ್ಕಾರ ಹಗರಣಗಳ ಸರ್ಕಾರ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಒಬ್ಬ ಅಭ್ಯರ್ಥಿ 21 ಪ್ರಶ್ನೆಗಳಿಗೆ ಉತ್ತರಿಸಿ 100 ಅಂಕ ಪಡೆದಿದ್ದಾನೆ. ಮತ್ತೊಬ್ಬ ಖಾಲಿ ಬಿಟ್ಟಿದ್ದ ಒಎಂಆರ್ ಸೀಟುಗಳನ್ನು ನಂತರ ಭರ್ತಿ ಮಾಡಲಾಗಿದೆ. ಸರ್ಕಾರ ಈ ಹಗರಣದ ಸಾಕ್ಷ್ಯಾ ನಾಶಕ್ಕೆ ಅವಕಾಶ ಕೊಟ್ಟು ತಡವಾಗಿ ಎಫ್ಐಆರ್ ದಾಖಲಿಸಿದೆ. ಈಗ ಪ್ರತಿಭಟನೆಯ ಬಳಿಕ ತನಿಖೆಗೆ ಆಗ್ರಹಿಸಿದ್ದು, ಸಿಐಡಿ ಪೊಲೀಸರು ಎಡಿಜಿಪಿ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಈಶ್ವರಪ್ಪ ರಾಜೀನಾಮೆ ಬಳಿಕ ರಕ್ಷಣಾತ್ಮಕವಾಗಿ ವರ್ತಿಸಲು ಬಿಜೆಪಿ ತನ್ನ ಬಿ ಟೀಮ್ ಮೇಲೆ ಒತ್ತಡ ಹೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಸೂಚಿಸಿದಂತೆ ಭ್ರಷ್ಟಾಚಾರವನ್ನು ಸಮಾ ಮಾಡಬೇಕೆ? ಶೇ.40ರಷ್ಟು ಕಮೀಷನ್ ಕಳಂಕದಿಂದ ಕರ್ನಾಟಕವನ್ನು ಶುದ್ದೀಕರಿಸಬಾರದೆ? ಭ್ರಷ್ಟಾಚಾರ ಮೇಲಿನ ಉಡಾಫೆ ಧೋರಣೆಯನ್ನು ಸಹಿಸಬೇಕೆ ಎಂದು ಪ್ರಶ್ನಿಸಿದ್ದಾರೆ.