ಹುಬ್ಬಳ್ಳಿ, ಏ 18 (DaijiworldNews/MS): ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕೋಮು ಭಾವನೆಗೆ ಧಕ್ಕೆ ತರುವ ವಿವಾದಾತ್ಮಕ ಅನಿಮೆಟೆಡ್ ವಿಡಿಯೋವೊಂದನ್ನು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡು ಗಲಭೆಗೆ ಕಾರಣನಾಗಿದ್ದ ಹಿನ್ನೆಲೆಯಲ್ಲಿ ಆರೋಪಿ ಯುವಕನಿಗೆ ನಗರದ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಹುಬ್ಬಳ್ಳಿಯ ಆರೋಪಿ ಯುವಕ ಅಭಿಷೇಕ ಹಿರೇಮಠ ನನ್ನು ನಾಲ್ಕನೆಯ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏಪ್ರಿಲ್ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಅಭಿಷೇಕ ಪರ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ನಾಳೆ ಸರ್ಕಾರಿ ವಕೀಲರಿಂದ ತಕರಾರು ಅರ್ಜಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನಾಳೆ ಪೊಲೀಸರ ಪರ ಹಾಗೂ ಸರ್ಕಾರದ ಪರ ತಕರಾರು ಸಲ್ಲಿಸಿದ ಬಳಿಕ ನಾವು ಅಭಿಷೇಕ ಹಿರೇಮಠ ಪರವಾಗಿ ಪ್ರಬಲವಾಗಿ ವಾದ ಮಂಡಿಸುತ್ತೇವೆ. ನಮ್ಮ ಜೊತೆಗೆ ದೊಡ್ಡಮಟ್ಟದ ವಕೀಲರ ತಂಡವಿದೆ. ಪ್ರಬಲವಾಗಿ ವಾದ ಮಂಡಿಸಿ ಜಾಮೀನು ಪಡೆಯುವ ವಿಶ್ವಾಸವಿದೆ. ಅಭಿಷೇಕ ಹಿರೇಮಠ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ನ್ಯಾಯಾಲಯದ ಪರವಾನಿಗೆ ಪಡೆದು ಪರೀಕ್ಷೆ ಬರೆಯಲು ಅವಕಾಶವನ್ನು ಪಡೆದುಕೊಳ್ಳುತ್ತೇವೆ ಎಂದು ಅಭಿಷೇಕ ಹಿರೇಮಠ ಪರ ವಕೀಲರಾದ ಸಂಜೀವ ಬಡಾಸ್ಕರ ಹೇಳಿದ್ದಾರೆ.